ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅವಘಡವೊಂದು ನಡೆದಿದ್ದು, ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆ ಬಿದ್ದ ಪರಿಣಾಮ ಮಗು ಸಾವನ್ನಪ್ಪಿದೆ. ಸಿಲಿಕಾನ್ ಸಿಟಿಯ ಎಚ್ ಎಎಲ್ ನ ಚಿನ್ನಪ್ಪನಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಶ್ರೀಶೈಲ್ ಎಂಬುವವರ ಪುತ್ರಿ ಮನುಶ್ರೀ ಅಲಿಯಾಸ್ ಪಾರು(4) ಸಾವನ್ನಪ್ಪಿರುವ ದುರ್ದೈವ ಮಗು. ಸಾವನ್ನಪ್ಪಿದ ಮಗುವಿನ ಕುಟುಂಬಸ್ಥರು ವಿಜಯಪುರ ಮೂಲದವರು ಎನ್ನಲಾಗಿದೆ. ಅಲ್ಲದೇ, ಘಟನೆಯಲ್ಲಿ ಮತ್ತಿಬ್ಬರು ಮಕ್ಕಳು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ಸಿಮೆಂಟ್ ಶೀಟ್ನ ಶೆಡ್‌ನಲ್ಲಿ ಕುಟುಂಬ ವಾಸವಾಗಿತ್ತು. ಶ್ರಿಯನ್ (6) ಮತ್ತು ಶೇಖರ್(5) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಮಾಣ ಹಂತದ ಕಟ್ಟಡವು ಶ್ರೀನಿವಾಸುಲು ಎಂಬುವವರಿಗೆ ಸೇರಿದೆ ಎನ್ನಲಾಗಿದೆ. ಮಾಲೀಕನ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. 4ನೇ ಮಹಡಿಯಿಂದ ಸುಮಾರು 10 ರಿಂದ 12 ಸಿಮೆಂಟ್ ಇಟ್ಟಿಗೆ ಬಿದ್ದಿವೆ ಎನ್ನಲಾಗಿದೆ.
