ಮಾ.9: ರಾಜ್ಯ ರಾಜಧಾನಿ ಹಾಗೂ ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಈಗ ನೆರೆರಾಜ್ಯದ ರಾಜಕೀಯ ಅಖಾಡದಲ್ಲೂ ಸದ್ದು ಮಾಡುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗ್ಗೆ ವ್ಯಂಗ್ಯವಾಡಿದ್ದು, ಹೈದರಾಬಾದ್ ಮಾಲಿನ್ಯ ಮುಕ್ತವಾಗಿ ಸಿಂಗಾಪುರ, ಟೋಕಿಯೊಗೆ ಸ್ಪರ್ಧೆ ನೀಡಲಿದೆ ಎಂದಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬೆಂಗಳೂರಿನ ಟ್ರಾಫಿಕ್ ಮತ್ತು ಮುಂಬೈ-ಚೆನ್ನೈನ ಮೂಲಸೌಕರ್ಯಗಳ ಕುರಿತು ಟೀಕಿಸಿದ್ದಾರೆ.

ಬೆಂಗಳೂರು ನಗರ ಇಂದು ಕೇವಲ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗಿದೆ. ಐಟಿ ಸಿಟಿ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರಿನ ಇಂದಿನ ಸ್ಥಿತಿ ಏನಾಗಿದೆ ನೋಡಿ? ಅಲ್ಲಿನ ಜನ ಟ್ರಾಫಿಕ್‌ನಿಂದ ಹೈರಾಣಾಗಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದು, ಈ ಮೂಲಕ ಕನ್ನಡಿಗರನ್ನು ಸುಖಾ ಸುಮ್ಮನೆ ಕೆಣಕಿದ್ದಾರೆ. ಮಳೆ ಬಂದರೆ ಚೆನ್ನೈ ಮತ್ತು ಮುಂಬೈ ನಗರಗಳು ಹೇಗೆ ಸ್ಥಗಿತಗೊಳ್ಳುತ್ತವೆ ಎಂಬುದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಹೈದರಾಬಾದ್ ಅಂತಹ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದಿದ್ದಾರೆ. ಹೈದರಾಬಾದ್ ಅನ್ನು ಮಾಲಿನ್ಯ ಮುಕ್ತ ನಗರವನ್ನಾಗಿ ಮಾಡುತ್ತೇವೆ. ನಮಗೆ ಬೆಂಗಳೂರು ಅಥವಾ ಮುಂಬೈ ನಗರಗಳು ಸ್ಪರ್ಧಿಯಲ್ಲ. ನಮ್ಮ ಸ್ಪರ್ಧೆ ಏನಿದ್ದರೂ ಸಿಂಗಾಪುರ ಮತ್ತು ಟೋಕಿಯೋದಂತಹ ಜಾಗತಿಕ ನಗರಗಳ ಜೊತೆಗೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಇದೀಗ ಅವರ ಹೇಳಿಕೆ ಕನ್ನಡಿಗರ ಮತ್ತು ರಾಜಕೀಯ ನಾಯಕರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇದು ಬೆಂಗಳೂರಿನ ಬ್ರ್ಯಾಂಡ್ ಇಮೇಜ್‌ಗೆ ಧಕ್ಕೆ ತರುವಂತಹ ಹೇಳಿಕೆಯಾಗಿದೆ.

Share.
Leave A Reply