ರಾಜ್ಯದಲ್ಲಿ ಅನೇಕ ಮಂದಿ ತಿನ್ನಲು ಒಂದು ಹೊತ್ತಿನ ಊಟ ಇಲ್ಲದೇ ಪರದಾಡುತ್ತಿರುತ್ತಾರೆ. ಆದರೆ ರಾಮನಗರ ಹೊರವಲಯದ ಹೆಲ್ತ್ ಸಿಟಿಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮಾದರಿ ಮೆಟ್ರಿಕ್ ನಂತರದ ಪುರುಷರ ಹಾಸ್ಟೆಲ್ನಲ್ಲಿ 15 ಕ್ವಿಂಟಲ್ ಗೋಧಿ ಮಣ್ಣುಪಾಲಾಗಿದೆ. ಹಾಸ್ಟೆಲ್ ವಾರ್ಡನ್ನ ನಿರ್ಲಕ್ಷ್ಯದಿಂದ ಬಡ ಮಕ್ಕಳ ಹಸಿವು ನೀಗಿಸಬೇಕಿದ್ದ ಆಹಾರವನ್ನ ಹೂಳಲಾಗಿದೆ. ಸರ್ಕಾರಿ ಹಾಸ್ಟೆಲ್ ವಾರ್ಡನ್ ಯೋಗೀಶ್ ನಿರ್ಲಕ್ಷ್ಯ ಹಾಗೂ ಅಸಡ್ಡೆಯಿಂದಾಗಿ ಬಡ ವಿದ್ಯಾರ್ಥಿಗಳ ಹೊಟ್ಟೆ ಸೇರಬೇಕಾದ ಗೋಧಿ ಮಣ್ಣು ಪಾಲಾಗಿದೆ.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದಲ್ಲಿ ಬೇರೆ ಬೇರೆ ಜಿಲ್ಲೆಗಳ 125 ವಿದ್ಯಾರ್ಥಿಗಳು ಇದ್ದು, ಅವರ ಹಸಿವು ನೀಗಿಸಲು ರಾಜ್ಯ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಡಿ 30 ಕ್ವಿಂಟಾಲ್ ಗೋಧಿ ನೀಡಲಾಗಿತ್ತು. ಈ ಗೋಧಿಯನ್ನು ಸರಿಯಾಗಿ ಬಳಕೆ ಮಾಡದ ಹಾಸ್ಟೆಲ್ ವಾರ್ಡನ್ ಯೋಗೀಶ್, ಹುಳು ಹಿಡಿದಿದೆ ಎಂದು ತಾಲೂಕು ಬಿಸಿಎಂ ಅಧಿಕಾರಿಗಳಿಗೆ ಹೇಳಿದ್ದರು. ನಂತರ ತಾಲೂಕು ಬಿಸಿಎಂ ಅಧಿಕಾರಿಗಳು 15 ಕ್ವಿಂಟಾಲ್ ಗೋಧಿಯನ್ನ ಸ್ವಚ್ಛಗೊಳಿಸಿ ಕನಕಪುರ ಹಾಸ್ಟೆಲ್ಗೆ ರವಾನಿಸಿ, ಉಳಿದ ಗೋಧಿಯನ್ನು ಬಳಸುವಂತೆ ಸೂಚಿಸಿದ್ದರು. ಆದರೆ ಆ ಉಳಿದ ಗೋಧಿಯನ್ನು ಬಳಸದೇ ಹುಳು ಹಿಡಿಯುವಂತೆ ಮಾಡಿದ್ದು, ಬಳಿಕ ಹಾಸ್ಟೆಲ್ ಹಿಂಭಾಗದಲ್ಲಿ ಜೆಸಿಬಿ ಮೂಲಕ ಗುಂಡಿ ತೆಗೆಸಿ ಮುಚ್ಚಿಸಿದ್ದಾರೆ. ನಂತರ ವಿಷಯ ತಿಳಿದ ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿಯನ್ನ ಸ್ಥಳಕ್ಕೆ ಆಗಮಿಸಿ 15 ಕ್ವಿಂಟಾಲ್ ಗೋಧಿ ಹೂತ ವಿಷಯವನ್ನ ಖಚಿತಪಡಿಸಿಕೊಂಡಿದ್ದು, ಹಾಸ್ಟೆಲ್ ವಾರ್ಡನ್ಗಳ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.
Read Also : ಭಟ್ಕಳದಲ್ಲಿ ರಾಶಿ ರಾಶಿ ದನಗಳ ಅಸ್ಥಿಪಂಜರ : ಇಬ್ಬರು ಪೊಲೀಸರ ಬಲೆಗೆ!
