ಮಂಡ್ಯ: ಬೆದರಿಕೆ ಹಾಕಿದ್ದ ರೌಡಿಶೀಟರ್ ನನ್ನೇ ಹತ್ಯೆ ಮಾಡಿರುವ ಘಟನೆಯೊಂದು ಜಿಲ್ಲೆಯ (Mandya) ಪಾಂಡವಪುರ ತಾಲ್ಲೂಕಿನ ಅಮೃತಿ ಗ್ರಾಮದ ಹತ್ತಿರ ನಡೆದಿತ್ತು. ಘಟನೆಯ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಸದ್ಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಘಟನೆ ನ. 29ರಂದು ನಡೆದಿತ್ತು. ರೌಡಿ ಶೀಟರ್ ಮಹೇಶ್ ಹತ್ಯೆಯಾಗಿದ್ದ. ಕೊಲೆಯಾದ ನಂತರ ಆರೋಪಿಗಳು ಪರಾರಿಯಾಗಿದ್ದರು. ಇದೀಗ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಸವರಾಜು, ಶಶಾಂಕ್‌, ಹೇಮಂತ್ ಕುಮಾರ್, ಸುಮಂತ್ ಬಂಧಿತ ಆರೋಪಿಗಳು.
ಕೊಲೆಯಾಗಿರುವ ರೌಡಿ ಶೀಟರ್ ಮಹೇಶ್, ಕೊಲೆ ಮಾಡಿರುವ ಆರೋಪಿಗಳ ಗುಂಪಿಗೆ ಹಲವು ದಿನಗಳಿಂದ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಹೀಗಾಗಿ ಗಾಬರಿಗೊಂಡಿದ್ದ ಯುವಕರು, ಸಿನಿಮಾ ಸ್ಟೈಲ್ ನಲ್ಲಿ ರೌಡಿಶೀಟರ್ ನನ್ನೇ ಮುಗಿಸಿದ್ದಾರೆ ಎನ್ನಲಾಗಿದೆ. ಕೊಲೆಯಾಗಿರುವ ಮಹೇಶ ಲಕ್ಷ್ಮೀಸಾಗರದ ನಿವಾಸಿ. ಆತನ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದವು. ಆತ 2023ರಲ್ಲಿ ಗಡಿಪಾರು ಕೂಡ ಆಗಿದ್ದ.

ಗಡಿಪಾರು ಆಗಿ ಬಂದ ನಂತರ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಕೊಲೆಯಾಗುವ ಮೂರು ದಿನದ ಹಿಂದೆ ಊರಿಗೆ ಬಂದು ಜಕ್ಕನಹಳ್ಳಿಯ ಬಾರ್ ವೊಂದರಲ್ಲಿ ಪಾರ್ಟಿ ಮಾಡಿ ಸ್ನೇಹಿತರಾದ ಕಿರಣ್ ಹಾಗೂ ಮರೀಗೌಡ ಜೊತೆಗೆ ಬೈಕ್ ನಲ್ಲಿ ಹೊರಟಿದ್ದ. ಆಗ ಅಟ್ಯಾಕ್ ಮಾಡಿದ್ದ ಗ್ಯಾಂಗ್ ಬೈಕ್ ಗೆ ಗುದ್ದಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಮಹೇಶ್ ಇನ್ನೂ ಬದುಕಿದ್ದ ಎನ್ನಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹೇಶ ಸಾವನ್ನಪ್ಪಿದ್ದ. ಈ ಕುರಿತು ಮೇಲುಕೋಟೆ ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ಎ1 ಆರೋಪಿ ಭೀಮ ನ್ಯಾಯಾಲಯದಲ್ಲಿ ಶರಣಾಗಿದ್ದ. ಆನಂತರ ಇನ್ನುಳಿದ ಆರೋಪಿಗಳು ಬೆಂಗಳೂರಿನಲ್ಲಿರುವುದು ಗೊತ್ತಾಗಿದೆ. ಈಗ ಅವರನ್ನೆಲ್ಲ ವಶಕ್ಕೆ ಪಡೆಯಲಾಗಿದೆ.

Share.
Leave A Reply