ಬಿಗ್‌ಬಾಸ್‌ ಕನ್ನಡ ಸೀಸನ್‌-12 ರಿಯಾಲಿಟಿ ಶೋಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕಾರ್ಯಕ್ರಮ ಶುರುವಾಗಿ ವಾರವಷ್ಟೇ ಕಳೆದಿದೆ. ಭಾನುವಾರವಷ್ಟೇ ಮೊದಲ ಎಲಿಮಿನೇಷನ್‌ ಆಗಿ ಇಬ್ಬರು ಮನೆಯಿಂದ ಹೊರಬಂದಿದ್ದಾರೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಳ್ಳುವಷ್ಟರಲ್ಲೇ ರಾಜ್ಯ ಸರ್ಕಾರ ಬಿಗ್‌ಬಾಸ್‌ಗೆ ಬಿಗ್‌ ಶಾಕ್‌ ನೀಡಿದೆ. ತಕ್ಷಣ ಬಿಗ್‌ಬಾಸ್‌ ಕಾರ್ಯಕ್ರಮ ಬಂದ್‌ ಮಾಡುವಂತೆ ಖಡಕ್‌ ಸೂಚನೆ ನೀಡಿದೆ. ಬಿಗ್‌ಬಾಸ್ ಹೌಸ್‌ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದೆ. ಬೆಂಗಳೂರು ಹೊರವಲಯದ ಬಿಡದಿ ಹೋಬಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ವೆಲ್ಸ್ ಸ್ಟುಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕನ್ನಡದ ಬಿಗ್‌ಬಾಸ್ ಶೋ ನಡೆಯುತ್ತಿದೆ. ಬಿಡದಿ ಹೋಬಳಿಯ ಇಂಡಸ್ಟ್ರಿಯಲ್ ಏರಿಯಾದ ಪ್ಲಾಟ್ ಸಂಖ್ಯೆ 24 ಮತ್ತು 25ರಲ್ಲಿ ಸ್ಟುಡಿಯೋ ನಿರ್ಮಿಸಿ ಮನರಂಜನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಪ್ರದೇಶದಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಯಾವುದೇ ಸಂಸ್ಕರಣೆಯಿಲ್ಲದೆ ಆವರಣದ ಹೊರಗೆ ಬಿಡಲಾಗುತ್ತಿದೆ. ಇದರಿಂದಗಿ ಈ ಪ್ರದೇಶದ ಸುತ್ತಮುತ್ತಲಿನ ಪರಿಸರದಲ್ಲಿ ಮಾಲಿನ್ಯವಾಗುತ್ತಿದೆ. ಇಲ್ಲಿಯ ನಿರ್ವಹಣೆಯೂ ತುಂಬಾ ಕಳಪೆಯಾಗಿದೆ. ನೀರು ಹರಿವು ಮಾರ್ಗದ ಚಾರ್ಟ್ ಸಿದ್ಧಪಡಿಸಿಲ್ಲ. ಎಸ್‌ಟಿಪಿ ಘಟಕಗಳನ್ನು ಲೇಬಲ್ ಮಾಡಲಾಗಿಲ್ಲ. STP ಪ್ರದೇಶದ ಬಳಿ ಉತ್ಪತ್ತಿಯಾಗುವ ಘನತ್ಯಾಜ್ಯಗಳಾದ ಕಾಗದದ ತಟ್ಟೆಗಳು, ಕಪ್‌ಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಯಾವುದೇ ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸದೆ, ವಿಲೇವಾರಿ ಮಾಡಲಾಗುತ್ತಿರುವ ಆರೋಪ ಬಿಗ್‌ಬಾಸ್ ಹೌಸ್ ವಿರುದ್ಧ ಕೇಳಿ ಬಂದಿದೆ. 625 ಕೆವಿಎ ಮತ್ತು 500 ಕೆವಿಎ ಸಾಮರ್ಥ್ಯದ ಡಿಜಿ ಸೆಟ್‌ಗಳನ್ನು ಸ್ಥಾಪಿಸಿ ನಿರ್ವಹಿಸಲಾಗುತ್ತಿದೆ. ಈ ಮೇಲಿನ ಎಲ್ಲಾ ನಿಯಮಗಳ ಉಲ್ಲಂಘನೆ ಹಿನ್ನೆಲೆ ಮುಂದಿನ ಆದೇಶದವರೆಗೆ ಇಲ್ಲಿಯ ಕಾರ್ಯಕ್ರಮ ಸ್ಥಗಿತಗೊಳಿಸಿ ಸ್ಥಳವನ್ನು ವಶಕ್ಕೆ ಪಡೆದುಕೊಳ್ಳುವಂತೆ ರಾಮನಗರ ಜಿಲ್ಲೆಯ ಉಪ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಈ ಘಟಕಕ್ಕೆ ಸರಬರಾಜು ಮಾಡಲಾಗಿರುವ ವಿದ್ಯುತ್ ಪೂರೈಕಯನ್ನು ಕಡಿತಗೊಳಿಸುವಂತೆ ಬೆಸ್ಕಾಂಗೆ ಸೂಚನೆ ನೀಡಿದೆ.

Share.
Leave A Reply