Site icon BosstvKannada

ವಿಷ್ಣು ಸಮಾಧಿ ವಿವಾದ : ಬಾಲಣ್ಣ ಕುಟುಂಬದಿಂದ ಭೂಮಿ ವಾಪಸ್‌ ಪಡೆಯಲು ಸರ್ಕಾರ ಚಿಂತನೆ

ರಾಜ್ಯದಲ್ಲಿ ಭುಗಿಲೆದ್ದಿದ್ದ ವಿಷ್ಣು ಸಮಾಧಿ ವಿವಾದಕ್ಕೆ ರಾಜ್ಯ‌ ಸರ್ಕಾರದ ಮಧ್ಯಸ್ಥಿಕೆಯಿಂದ ಹೊಸ ತಿರುವು ಸಿಕ್ಕಿದೆ. ರಾತ್ರೋ ರಾತ್ರಿ ಅಭಿಮಾನಿ ಸ್ಟೂಡಿಯೋದಲ್ಲಿರುವ ವಿಷ್ಣು ಸಮಾಧಿ ನೆಲಸಮಗೊಳಿಸಿದ್ರಿಂದ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿತ್ತು. ಇದರಿಂದ ವಿಷ್ಣು ಅಭಿಮಾನಿಗಳು ತೀರಾ ಬೇಸರದಲ್ಲಿದ್ದರು. ಆದ್ರೆ ಈ ಎಲ್ಲಾ ವಿವಾದ ಗೊಂದಲಗಳಿಗೆ ರಾಜ್ಯ ಸರ್ಕಾರ ಈಗ ತೆರೆ ಎಳೆದಿದ್ದು, ವಿಷ್ಣು ಸಮಾಧಿಯ ವಿವಾದಕ್ಕೆ ಪೂರ್ಣ ವಿರಾಮ ಸಿಕ್ಕಿದೆ.

ಅಭಿಮಾನ್‌ ಸ್ಟೂಡಿಯೋ ಜಾಗ ಅರಣ್ಯ ಪ್ರದೇಶದ್ದು ಎಂದು ಘೋಷಣೆ ಮಾಡಲಾಗಿದೆ. ಘೋಷಣೆ ಪತ್ರವನ್ನ ಐಎಸ್‌ಎಫ್‌ ಅಧಿಕಾರಿ ಬೆಂಗಳೂರು ಜಿಲ್ಲಾಧಿಕಾರಿಗೆ ರವಾನಿಸಿದ್ದಾರೆ. ಹಿರಿಯ ನಟ ದಿ.ಬಾಲಕೃಷ್ಣ ಅವರಿಗೆ ನೀಡಿದ್ದ 20 ಎಕರೆ ಜಾಗವನ್ನ ಪರಭಾರೆ ಮಾಡುವಂತಿಲ್ಲ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಬಾಲಕೃಷ್ಣ ಕುಟುಂಬ 20 ಎಕರೆ ಭೂಮಿಯಲ್ಲಿ 12 ಎಕರೆಯನ್ನ ಮಾರಾಟ ಮಾಡಿದೆ. ಸರ್ಕಾರದ ಅಧಿನಿಯಮವನ್ನ ಉಲ್ಲಂಘಿಸಿ ಭೂಮಿಯನ್ನ ಮಾರಾಟ ಮಾಡಲಾಗಿದೆ. ಹೈಕೋರ್ಟ್‌ ಆದೇಶದಂತೆ 5 ವರ್ಷದಲ್ಲಿ ಅಭಿಮಾನ್‌ ಸ್ಟುಡಿಯೋವನ್ನ ನಿರ್ಮಾಣ ಮಾಡಬೇಕಿತ್ತು. ಇದುವರೆಗೆ ಅಭಿಮಾನ್‌ ಸ್ಟುಡಿಯೋವನ್ನ ನಿರ್ಮಾಣ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಸದರಿ ಪ್ರದೇಶ ಅರಣ್ಯ ಇಲಾಖೆಯದ್ದು ಎಂದು ಐಎಸ್‌ಎಫ್‌ ಅಧಿಕಾರಿ ಪತ್ರದಲ್ಲಿ ತಿಳಿಸಿದ್ದಾರೆ.

ಆದ್ರಿಂದ ಸದರಿ ಪ್ರದೇಶ ಅರಣ್ಯ ಪ್ರದೇಶದ್ದು ಎಂದು ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಬಾಲಕೃಷ್ಣ ಕುಟುಂಬದಿಂದ ಭೂಮಿಯನ್ನ ವಾಪಸ್‌ ಪಡೆಯಲು ಚಿಂತನೆ ನಡೆಸಿದೆ ಎನ್ನಲಾಗಿದೆ.

Read Also : ಸ್ಯಾಂಡಲ್‌ವುಡ್‌ನಲ್ಲಿ ಸುನಾಮಿ ಎಬ್ಬಿಸಿದ ʻಸು ಫ್ರಮ್‌ಸೋʼ.. ಬಾಕ್ಸಾಫೀಸ್‌ ಧೂಳೀಪಟ!

Exit mobile version