Site icon BosstvKannada

ಉತ್ತರಕಾಶಿಯಲ್ಲಿ ಅಲ್ಲೋಲ ಕಲ್ಲೋಲ.. ಧರಾಲಿ ಕೆಸರುಮಯ : ದುರಂತ ಸ್ಥಳಕ್ಕೆ ಸಿಎಂ ಧಾಮಿ ಭೇಟಿ

ದೇವಭೂಮಿ ಉತ್ತರಾಖಂಡ್‌ನಲ್ಲಿ ಭಾರಿ ಮಳೆಯಾಗಿದ್ದು ಮೇಘಸ್ಫೋಟದಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮ ಸಂಪೂರ್ಣ ಕೆಸರಿನಿಂದ ಸಮಾಧಿಯಾಗಿದೆ. ಕ್ಷಣ ಮಾತ್ರದಲ್ಲೇ ಮನೆಗಳು, ಕಟ್ಟಡಗಳು ಪ್ರವಾಹಕ್ಕೆ ಸಿಲುಕಿ ನಾಮಾವಶೇಷವಾಗಿದೆ.

ಈ ದುರಂತದಲ್ಲಿ ಐವರು ದುರ್ಮರಣಕ್ಕೀಡಾಗಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಬೆಟ್ಟದ ಮೇಲಿಂದ ಯಮಸ್ವರೂಪಿಯಂತೆ ನುಗ್ಗಿದ ಕೆಸರು ಮಿಶ್ರಿತ ನೀರು ಪ್ರಳಯ ಸೃಷ್ಟಿಸಿದ್ದು ಘಟನೆಯ ದೃಶ್ಯಗಳು ಬೆಚ್ಚಿ ಬೀಳಿಸುವಂತಿದೆ. ಈ ವೇಳೆ ದಿಢೀರ್ ಮೇಘಸ್ಫೋಟಕ್ಕೆ ಹೆದರಿದ ಧರಾಲಿ ಗ್ರಾಮದ ಜನ ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.

ರಣ ಭೀಕರ ಪ್ರವಾಹಕ್ಕೆ ಬಹುಮಹಡಿ ಕಟ್ಟಡಗಳು ಸಣ್ಣ ಆಟಿಕೆಗಳಂತೆ ಕೊಚ್ಚಿ ಹೋಗಿವೆ. ಗ್ರಾಮದಲ್ಲಿದ್ದ 25ಕ್ಕೂ ಹೆಚ್ಚು ಹೋಟೆಲ್ ಹಾಗೂ ಮನೆಗಳು ಧ್ವಂಸಗೊಂಡಿವೆ. ಇಡೀ ಪ್ರದೇಶ ಕೆಸರುಮಯವಾಗಿದೆ. ಮೇಘಸ್ಫೋಟ ಸಂಭವಿಸುವ ವೇಳೆ ನೂರಾರು ಜನರು ತಮ್ಮ ಮನೆಗಳಲ್ಲೇ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಸಿಎಂ ಧಾಮಿ ದೌಡು
ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಮೇಘಸ್ಫೋಟದ ನಂತರದ ಪರಿಸ್ಥಿತಿಯನ್ನು ಅವಲೋಕಿಸಲು ಉತ್ತರಕಾಶಿಗೆ ಭೇಟಿ ನೀಡಿದ್ದಾರೆ. ಪೀಡಿತ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಮಳೆಯಿಂದ ತತ್ತರಿಸಿರುವ ರಾಜ್ಯಾದ್ಯಂತ ಪರಿಹಾರ ಮತ್ತು ಸ್ಥಳಾಂತರಿಸುವ ಕಾರ್ಯಾಚರಣೆ ಮುಂದುವರೆದಿದ್ದು, ಇದುವರೆಗೆ 130 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಭೂಕುಸಿತ, ನದಿ ಮಟ್ಟ ಏರಿಕೆ ಮತ್ತು ರಸ್ತೆಗಳು ಕೊಚ್ಚಿ ಹೋಗಿರುವುದರಿಂದ ಹಲವಾರು ಪ್ರದೇಶಗಳ ಸಂಪರ್ಕ ಕಡಿತಗೊಂಡಿವೆ ಎಂದು ತಿಳಿಸಿದ್ದಾರೆ.

Exit mobile version