ಉತ್ತರ ಪ್ರದೇಶದ (Uttar Pradesh) ಪ್ರಯಾಗ್ ರಾಜ್ನಲ್ಲಿ(Prayag Raj) ನಡೆಯುತ್ತಿರುವ ಜಾಗತೀಕ ಮಟ್ಟದ ಹಿಂದೂ ಧರ್ಮದ ಅತ್ಯಂತ ಬೃಹತ್ ಉತ್ಸವ ಮಹಾ ಕುಂಭಮೇಳ ಹದಿನಾರು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಹದಿನೇಳನೇ ದಿನಕ್ಕೆ ಕಾಲಿಟ್ಟಿದ್ದೆ. ಈವರೆಗೂ ಶಾಂತಿಯುತವಾಗಿ ನಡೆದಿದ್ದ ಮಹಾ ಕುಂಭಮೇಳದಲ್ಲಿ ಇಂದು ಅವಘಡ ಸಂಭವಿಸಿದೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
ಉತ್ತರ ಪ್ರದೇಶದ (Uttar Pradesh) ಪ್ರಯಾಗ್ರಾಜ್ನಲ್ಲಿ(Prayag Raj) ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಾಘ ಮಾಸದ ಅಮಾವಾಸ್ಯೆ/ ಮೌನಿ ಅಮಾವಾಸ್ಯೆಯ ಇಂದು ಸಂಗಮ್ನಲ್ಲಿ ಪುಣ್ಯ ಸ್ನಾನದ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ಈ ದುರ್ಘಟನೆಯಲ್ಲಿ ಹಲವಾರು ಗಾಯಗೊಂಡಿದ್ದಾರೆ.

ಭಾರತದ ಮೂರು ಪವಿತ್ರ ನದಿಗಳು ಒಟ್ಟಿಗೆ ಸೇರುವ ಈ ಸಂಗಮದಲ್ಲಿ ಮೌನಿ ಅಮಾವಾಸ್ಯೆಯಂದು ಪುಣ್ಯ ಸ್ನಾನಕ್ಕಾಗಿ ಕೋಟ್ಯಾಂತರ ಭಕ್ತಾಧಿಗಳು ಕೂಡ ನೆರೆದಿದ್ದಾರೆ. ಈ ಸಂದರ್ಭದಲ್ಲಿ ಸಂಗಮ್ನಿಂದ ಸುಮಾರು ಒಂದು ಕಿಲೋಮೀಟರ್ ವರೆಗೂ ಜನಸಂದಣಿ ಮಧ್ಯೆ ಬ್ಯಾರಿಕೇಡ್ಗಳು ಮುರಿದು ಕೆಲವು ಮಹಿಳೆಯರು ಪ್ರಜ್ಞಾಹೀನರಾಗಿ ಬಿದ್ದಿದ್ದು ಕಾಲ್ತುಳಿತ ಉಂಟಾಗಿದೆ. ಈ ದುರ್ಘಟನೆಯ ಬಳಿಕ ಮಹಾ ಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯ ಅಮೃತ ಸ್ನಾನವನ್ನು ರದ್ದುಗೊಳಿಸಲಾಗಿದೆ ಎಂದು ಅಖಿಲ ಭಾರತೀಯ ಅಖಾರ ಪರಿಷತ್ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಮಾಹಿತಿ ನೀಡಿದ್ದಾರೆ.
ಇನ್ನೂ ಈ ದುರ್ಘಟನೆಯಲ್ಲಿ ಕಾಲ್ತುಳಿತದಿಂದ ಗಾಯಗೊಂಡವರನ್ನು ಮಹಾ ಕುಂಭಮೇಳದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕೆಲವರನ್ನು ಬೈಲಿ ಆಸ್ಪತ್ರೆ ಮತ್ತು ಸ್ವರೂಪ್ ರಾಣಿ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಹಿಂದೂ ಧರ್ಮದಲ್ಲಿ ಮೌನಿ ಅಮಾವಾಸ್ಯೆಯಂದು ಪವಿತ್ರ ನದಿಗಳಲ್ಲಿ ಪುಣ್ಯ ಸ್ನಾನ ಮಾಡುವುದಕ್ಕೆ ಬಹಳ ಮಹತ್ವವಿದೆ. ಈ ವರ್ಷ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ 2025 ನಡೆಯುತ್ತಿರುವುದರಿಂದ ಇಲ್ಲಿನ ಅಮೃತ್ ಸ್ನಾನದಲ್ಲಿ ಮಿಂದೇಳಲು ಸುಮಾರು 10ಕೋಟಿ ಭಕ್ತರು ನೆರೆದಿದ್ದಾರೆ. ಕುಂಭಮೇಳಸ ಸಂಪ್ರದಾಯಗಳ ಪ್ರಕಾರ, ಸನ್ಯಾರಿ, ಬೈರಾಗಿ, ಉದಾಸೀನ್ ಎಂಬ ಮೂರು ಪಂಗಡಗಳಿಗೆ ಸೇರಿದ ಅಖಾರಾಗಲು ಸಂಗಮ ಘಾಟ್ಗೆ ಮೆರವಣಿಗೆಯಲ್ಲಿ ತೆರಳಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.
ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿದ್ದು, ಹತ್ತಕ್ಕೂ ಹೆಚ್ಚು ಭಕ್ತರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಇನ್ನು ಘಟನೆಯಲ್ಲಿ ಹತ್ತಾರು ಭಕ್ತರು ಗಾಯಗೊಂಡಿದ್ದು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಅವಘಡದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮಹಾ ಕುಂಭಮೇಳದಲ್ಲಿ ಇನ್ನಷ್ಟು ಭದ್ರತೆ ಹೆಚ್ಚಿಸಿ ಭಕ್ತರಿಗೆ ಯಾವುದೇ ರೀತಿಯಲ್ಲೂ ಅನಾನುಕೂಲವಾಗುವಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇತ್ತ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಿರಿಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ಭದ್ರತೆಗೆ ಸೂಚಿಸಿದ್ದಾರೆ.