ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ 2025ರ ಮಹಾ ಕುಂಭಮೇಳದಲ್ಲಿ (Kumbh Mela)ಕಾಲ್ತುಳಿತ ಸಂಭವಿಸಿ 15ಕ್ಕೂ ಭಕ್ತರು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.


ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಮಹಾ ಕುಂಭಮೇಳಕ್ಕೆ(Kumbh Mela) ಭೇಟಿ ನೀಡುತ್ತಿದ್ದಾರೆ. ಇದರಿಂದ ಪ್ರಯಾಗ್ರಾಜ್ನ ಸಂಗಮ್ ಪ್ರದೇಶದಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ಏಕಾಏಕಿ ಜನರು ನುಗ್ಗಿಕೊಂಡು ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದರ ಜೊತೆಗೆ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಹಲವಾರು ಜನರು ತಮ್ಮ ತಮ್ಮ ಸಂಬಂಧಿಗಳನ್ನು ಕಳೆದುಕೊಂಡು ದುಃಖಿಸುತ್ತಿದ್ದಾರೆ. ಜನರು ಏಕಾಏಕಿ ನುಗ್ಗಿಕೊಂಡು ಬಂದಿದ್ದರಿಂದ ತಮ್ಮವರು ನಾಪತ್ತೆ ಆಗಿದ್ದಾರೆ ಎಂದು ಕೆಲವರು ಅಳುತ್ತ ದೂರು ಹೇಳುತ್ತಿದ್ದಾರೆ. ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದು ಪ್ರಯಾಗ್ರಾಜ್ ಕಡೆಗೆ ತೆರಳುವ ವಾಹನಗಳನ್ನು ಕೆಲ ಸಮಯ ತಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಜನವರಿ 13ರಂದು ಆರಂಭವಾದ ಮಹಾಕುಂಭ ಮೇಳಕ್ಕೆ ಈ ಬಾರಿ ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಇದುವರೆಗೆ ಸುಮಾರು 15 ಕೋಟಿ ಮಂದಿ ಸಂಗಮಕ್ಷೇತ್ರದಲ್ಲಿ ಪವಿತ್ರಸ್ನಾನ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಎರಡನೇ ಅಮೃತಸ್ನಾನದ ದಿನವಾದ ಬುಧವಾರ ಲಕ್ಷಾಂತರ ಭಕ್ತರು ಪ್ರಯಾಗ್ರಾಜ್ ಯಾತ್ರೆ ಕೈಗೊಂಡಿರುವುದರಿಂದ ಭಾರಿ ಜನದಟ್ಟಣೆ ಕಂಡುಬಂದಿದೆ.
ಮಹಾಕುಂಭ ಮೇಳದ ಮೌನಿ ಅಮಾವಾಸ್ಯೆ ವೇಳೆ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಪವಿತ್ರ ಸ್ನಾನಕ್ಕೆ ಭಕ್ತಸಾಗರವೇ ಹರಿದಿದೆ. ಮಂಗಳವಾರ ಮಧ್ಯರಾತ್ರಿಯ ಬಳಿಕ ಜನದಟ್ಟಣೆ, ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಹಲವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.