ಕಳೆದ ಕೆಲ ವರ್ಷಗಳಿಂದ ಒಕ್ಕೂಟ ವ್ಯವಸ್ಥೆಯ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ನಿರಂತರವಾಗಿ ಸಂಘರ್ಷ ಏರ್ಪಡುತ್ತಿರುವ ನಡುವೆಯೇ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಒಕ್ಕೂಟ ವ್ಯವಸ್ಥೆಯ ಸೊಗಸಿಗೆ ಸಾಕ್ಷಿಯಾಯ್ತು. ಏಕೆಂದ್ರೆ ಜಿಎಸ್‌ಟಿ ಹಣ ಹಂಚಿಕೆಯಲ್ಲಿ ತಾರತಮ್ಯ, ಹಿಂದಿ ಹೇರಿಕೆ ಹಾಗೂ ಪ್ರಾದೇಶಿಕ ಭಾಷೆಗಳ ನಿರ್ಲಕ್ಷ್ಯ, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಅನುದಾನ ತಾರತಮ್ಯ, ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಭಿನ್ನಾಭಿಪ್ರಾಯ ಹೀಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ತಿಕ್ಕಾಟ ನಡೆಸುತ್ತಿವೆ.
ಕಳೆದ ತಿಂಗಳು ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯನವರಿಗೆ ಆಹ್ವಾನ ಕುರಿತು ಪ್ರೋಟೋಕಾಲ್ ಪಾಲನೆಯಾಗಿಲ್ಲವೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸಿಎಂ, ಡಿಸಿಎಂ ಸೇರಿದಂತೆ ರಾಜ್ಯ ಕಾಂಗ್ರೆಸ್ ಮುಖಂಡರು ಕಿಡಿ ಕಾರಿದ್ದರು. ಇದಲ್ಲದೆ ಅಭಿವೃದ್ಧಿಯ ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ನಿರಂತರವಾಗಿ ವಾಕ್ಸಮರ ನಡೆಸುವುದು ಕಂಡುಬರುತ್ತಿತ್ತು. ಹಾಗಿದ್ದರೂ ಭಾನುವಾರ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ರಾಜಕೀಯ ವೈರಿಗಳು ಹಾಗೂ ಭಿನ್ನ ರಾಜಕೀಯ ಪಕ್ಷಗಳ ಮುಖಂಡರು ಅಭಿವೃದ್ಧಿ ವಿಚಾರವಾಗಿ ಒಂದಾಗಿ ಹೆಜ್ಜೆ ಹಾಕಲು ಕಾರಣವಾಯ್ತು.
ವಂದೇ ಭಾರತ್ ರೈಲುಗಳ ಉದ್ಘಾಟನೆಗೆ ಪ್ರಧಾನಿ ಜೊತೆಗೆ ಸಿಎಂ ಸಿದ್ದರಾಮಯ್ಯ ಭಾಗಿಯಾದ್ರು. ಅದಲ್ಲದೆ, ರಾಗಿಗುಡ್ಡದಲ್ಲಿ ಮೆಟ್ರೋ ಎಲ್ಲೋ ಮಾರ್ಗ ಉದ್ಘಾಟನೆ ಮಾಡಿ ಪ್ರಧಾನಿಯೊಂದಿಗೆ ಸಿಎಂ ಮಾತ್ರವಲ್ಲದೆ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ರು. ಇನ್ನು ಮೆಟ್ರೋ ಮೂರನೇ ಹಂತದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಂತೂ ಎಲ್ಲಾ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಒಟ್ಟಾಗಿ ಪಾಲ್ಗೊಂಡರು.
ಪ್ರಧಾನಿ, ಸಿಎಂ, ಡಿಸಿಂ ಮಾತ್ರವಲ್ಲದೆ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ಸಂಸದರಾದ ಡಾ. ಸಿ.ಎನ್. ಮಂಜುನಾಥ್, ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರದ ಸಚಿವರಾದ ಭೈರತಿ ಸುರೇಶ್ ಮತ್ತಿತರ ಮುಖಂಡರು ಪಾಲ್ಗೊಂಡರು. ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಮೆಟ್ರೋ ಕಾಮಗಾರಿಗೆ ಕೇಂದ್ರಕ್ಕಿಂತ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ.
ಹಾಗೆಯೇ ಗುಜರಾತ್, ಮಹಾರಾಷ್ಟ್ರದಂತೆ ಕರ್ನಾಟಕಕ್ಕೂ ಹೆಚ್ಚಿನ ಅನುದಾನ ಕೊಡಿ ಎಂಬ ಅಂಶವನ್ನು ನಗುತ್ತಾ ಹೇಳಿದ್ದು ಬಿಟ್ಟರೆ ಎಲ್ಲಿಯೂ ಪರಸ್ಪರರನ್ನು ದೂರುವ, ಕಾಲೆಳೆಯುವ ಉದಾಹರಣೆ ಕಂಡುಬರಲಿಲ್ಲ. ಬದಲಿಗೆ ನಗು ನಗುತ್ತಲೇ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು ಕಂಡುಬಂತು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿಯವರು ಸಿಎಂ ಹಾಗೂ ಡಿಸಿಎಂ ಅವರೊಂದಿಗೆ ಹೆಚ್ಚು ಮಾತನಾಡುತ್ತ ಸಮಯ ಕಳೆದಿದ್ದು ವಿಶೇಷವಾಗಿತ್ತು.

