ಲಾಸ್ ಏಂಜಲೀಸ್ನಲ್ಲಿ 12 ಸಾವಿರ ಕಟ್ಟಡಗಳು ಬೆಂಕಿಗಾಹುತಿ


ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿ(Los Angeles, California) ಕಾಡ್ಗಿಚ್ಚು ದಿನ ಕಳೆದಂತೆ ವ್ಯಾಪಿಸುತ್ತಲೇ ಇದೆ.. ಲಾಸ್ ಏಂಜಲೀಸ್ನಲ್ಲಿ ಹಬ್ಬಿರುವ ಭೀಕರ ಕಾಡ್ಗಿಚ್ಚು ತಣ್ಣಗಾಗುವ ಲಕ್ಷಣ ಕಂಡುಬರುತ್ತಿಲ್ಲ. ಗಾಳಿಯಿಂದಾಗಿ ಬೆಂಕಿ ವ್ಯಾಪಕವಾಗಿ ಹರಡುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗ್ತಿದೆ.. ಇದುವರೆಗೂ ಸುಮಾರು 25 ಜನ ಈ ಘೋರ ಕಾಡ್ಗಿಚ್ಚಿಗೆ ಬಲಿಯಾಗಿದ್ದಾರೆ. ಲಾಸ್ ಏಂಜಲೀಸ್ನ ಪೆಸಿಫಿಕ್ ಪ್ಯಾಲೆಸೇಡ್ಸ್ ಮತ್ತು ಈಟನ್ ಪ್ರದೇಶದಲ್ಲಿ ಹೆಚ್ಚು ಸಾವು-ನೋವುಗಳು ಸಂಭವಿಸಿದೆ.. ಪೆಸಿಫಿಕ್ ಪ್ಯಾಲೆಸೇಡ್ಸ್ ಪ್ರದೇಶದಲ್ಲಿ 8 ಜನ ಮತ್ತು ಈಟನ್ ಪ್ರದೇಶದಲ್ಲಿ 17 ಜನ ಕಾಡ್ಗಿಚ್ಚಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಅಂತಾ ರಕ್ಷಣಾ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ಭೀಕರ ಕಾಡ್ಗಿಚ್ಚು ವನ್ಯಜೀವಿಗಳ ಮೇಲೂ ಪರಿಣಾಮ ಬೀರಿದ್ದು, ಭಾರೀ ಸಂಖ್ಯೆಯಲ್ಲಿ ವನ್ಯಜೀವಿಗಳು ಮೃತಪಟ್ಟಿವೆ ಅನ್ನೋ ಆಘಾತಕಾರಿ ಸುದ್ದಿ ಹೊರಬಿದ್ದಿದೆ.


ಇನ್ನು, ಭೀಕರ ಸ್ವರೂಪ ಪಡೆದುಕೊಂಡಿರುವ ಕಾಡ್ಗಿಚ್ಚು ನಿಯಂತ್ರಿಸಲು ನಿರಂತರ ಕಾರ್ಯಾಚರಣೆ ಮುಂದುವರಿಯುತ್ತಿದ್ದು, ಮಹಾ ಆಪತ್ತು ಎದುರಿಸಲು ಅಧಿಕಾರಿಗಳು ವಿಶಿಷ್ಟ ಕ್ರಮವೊಂದನ್ನು ಘೋಷಿಸಿದ್ದಾರೆ. ಕಾಡ್ಗಿಚ್ಚು ನಿಯಂತ್ರಣ ಕಾರ್ಯಕ್ಕೆ ಕೈ ಜೋಡಿಸುವ ಕೈದಿಗಳಿಗೆ ಶಿಕ್ಷೆಯ ಅವಧಿ ಕಡಿತ ಮತ್ತು ಸಂಬಳದ ಕೊಡುಗೆಯನ್ನು ಕ್ಯಾಲಿಫೋರ್ನಿಯಾದ ಸುಧಾರಣೆ ಮತ್ತು ಪುನರ್ವಸತಿ ಇಲಾಖೆ ಮುಂದಿಟ್ಟಿದೆ ಅಂತಾ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಲಾಸ್ ಏಂಜಲೀಸ್ನಲ್ಲಿ (Los Angeles) ಕೈದಿಗಳು ಅಗ್ನಿಶಾಮಕ ಸಿಬ್ಬಂದಿ ಜತೆ ಕೆಲಸ ಮಾಡುತ್ತಾ ಬೆಂಕಿ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ. 931 ಕೈದಿಗಳು ಬೆಂಕಿ ನಿಯಂತ್ರಿಸುವ ಕಾರ್ಯದಲ್ಲಿ ಕೈಜೋಡಿಸಿದ್ದು 3 ಪಾಳಿಗಳಲ್ಲಿ ದುಡಿಯುತ್ತಿದ್ದಾರೆ. ವಿನಾಶಕಾರಿ ಕಾಡ್ಗಿಚ್ಚನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೈದಿಗಳಿಗೆ ಅವರ ಕೌಶಲ್ಯ ಮತ್ತು ಅನುಭವದ ಆಧಾರದ ಮೇಲೆ ದಿನಕ್ಕೆ 5.80 ಡಾಲರ್ನಿಂದ 10.24 ಡಾಲರ್ ವರೆಗೆ ವೇತನ ನೀಡಲಾಗುತ್ತಿದೆ. ಕಾಡ್ಗಿಚ್ಚು ನಿಯಂತ್ರಣದಲ್ಲಿ ನೇರವಾಗಿ ಕೈಜೋಡಿಸಿದ ಕೈದಿಗಳಿಗೆ ಎರಡು ದಿನಕ್ಕೆ ಒಂದು ಕ್ರೆಡಿಟ್ ವ್ಯವಸ್ಥೆಯಡಿ, ಒಂದು ದಿನದ ಕೆಲಸಕ್ಕೆ ಶಿಕ್ಷೆಯಲ್ಲಿ 2 ದಿನದ ರಿಯಾಯಿತಿ ಲಭಿಸಲಿದೆ. ಅಂದರೆ 1 ದಿನದ ಕಾರ್ಯಾಚರಣೆಗೆ ಶಿಕ್ಷೆಯಲ್ಲಿ 1 ದಿನದ ರಿಯಾಯಿತಿ ಸಿಗಲಿದೆ.


ಇನ್ನು, ಸಣ್ಣ ಪ್ರಮಾಣದಲ್ಲಿದ್ದ ಕಾಡ್ಗಿಚ್ಚು ಬಿರುಗಾಳಿಯಿಂದಾಗಿ ಕ್ಷಿಪ್ರಗತಿಯಲ್ಲಿ ಹರಡಿದ್ದು ಸ್ಯಾನ್ಫ್ರಾನ್ಸಿಸ್ಕೋ ನಗರಕ್ಕಿಂತ ದೊಡ್ಡ ಪ್ರಮಾಣದ ಭೂಪ್ರದೇಶವನ್ನು ಸುಟ್ಟುಹಾಕಿದೆ. 12,000ಕ್ಕೂ ಅಧಿಕ ಕಟ್ಟಡಗಳಿಗೆ ಹಾನಿಯಾಗಿದ್ದು ಸಾವಿರಾರು ಮಂದಿ ಸುರಕ್ಷಿತ ಪ್ರದೇಶಕ್ಕೆ ಧಾವಿಸಿದ್ದಾರೆ. ಬೆಂಕಿಯ ಜ್ವಾಲೆಗಳು ಲಾಸ್ ಏಂಜಲೀಸ್ನ(Los Angeles) ಅಕ್ಕಪಕ್ಕದ ನಗರಗಳಲ್ಲಿನ ಹಲವು ಜನನಿಬಿಡ ಪ್ರದೇಶಗಳಿಗೆ ವ್ಯಾಪಿಸಿದ್ದು ಸುಮಾರು 1 ಲಕ್ಷದ 50 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. 9 ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಲಾಗಿದ್ದು ಕ್ಯಾಲಿಫೋರ್ನಿಯಾದಲ್ಲಿ 70 ಸಾವಿರ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ. ಈ ಪ್ರದೇಶಾದ್ಯಂತ ಒಳಚರಂಡಿ, ನೀರು ಮತ್ತು ವಿದ್ಯುತ್ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..
ಒಟ್ನಲ್ಲಿ, ದಿನದಿಂದ ದಿನಕ್ಕೆ ಕಾಡ್ಗಿಚ್ಚು ಹತೋಟಿಗೆ ಸಿಗದಂತೆ ವ್ಯಾಪಿಸುತ್ತಿದ್ದು, ಕ್ಯಾಲಿಫೋರ್ನಿಯಾದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗ್ತಿದೆ.. ಈ ಬೆಂಕಿ ಆರ್ಭಟ ಯಾವಾಗ ತಣ್ಣಗಾಗುತ್ತೋ ಅನ್ನೋ ಚಿಂತೆಯಲ್ಲಿದ್ದಾರೆ..
ಬ್ಯೂರೋ ರಿಪೋರ್ಟ್ ಬಾಸ್ ಟಿವಿ ಕನ್ನಡ.