ಕುಂದಾನಗರಿಯಲ್ಲಿ ಮತ್ತೆ ಕಿಚ್ಚು ಹಚ್ಚಿದ್ರಾ ಡಿಕೆಶಿ..?
ರಾಜ್ಯ ರಾಜಕಾರಣದ್ದೇ ಒಂದು ತೂಕವಾದ್ರೆ, ಕುಂದಾನಗರಿ ಬೆಳಗಾವಿಯದ್ದೇ ಮತ್ತೊಂದು ತೂಕ.. ರಾಜ್ಯ ರಾಜಕೀಯದ್ದೇ ಒಂದು ಲೆಕ್ಕವಾದ್ರೆ, ಬೆಳಗಾವಿಯದ್ದೇ ಮತ್ತೊಂದು ಲೆಕ್ಕ.. ಪ್ರತಿ ಬಾರಿಯೂ ಒಂದಿಲ್ಲೊಂದು ಅಂತರ್ಯುದ್ಧದೊಂದಿಗೆ ಸದ್ದು ಮಾಡುವ ಬೆಳಗಾವಿ ಈಗ ಮತ್ತೊಮ್ಮೆ ಪ್ರಾಬಲ್ಯದ ವಿಚಾರದ ಕಿಡಿ ಹೊತ್ತಿಕೊಂಡಿದೆ.. ಅದೂ ಸಿಎಲ್ಪಿ ಸಭೆಯಲ್ಲೇ ಸತೀಶ್ ಜಾರಕಿಹೊಳಿ(Satish Jarkiholi), ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar)ಮಧ್ಯೆ ಕಿಚ್ಚು ಜ್ವಾಲೆಯಂತೆ ಧಗಧಗಿಸಿದೆ..

ಯೆಸ್.. ಬೆಂಗಳೂರಿನಲ್ಲಿ ನಡೆದ ಸಿಎಲ್ಪಿ ಸಭೆಯಲ್ಲಿ ಕುಂದಾನಗರಿ ರಾಜಕೀಯ ಮತ್ತೊಮ್ಮೆ ಭಾರಿ ಸೌಂಡ್ ಮಾಡಿದೆ. ಕ್ರಿಡಿಟ್ ವಾರ್ಗಾಗಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ತೀವ್ರ ವಾಕ್ಸಮರ ನಡೆದಿದೆ.. ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸಮ್ಮುಖದಲ್ಲೇ ಡಿಸಿಎಂ ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ರನ್ನು ಹಾಡಿಹೊಗಳಿದ್ದು, ಸತೀಶ್ ಜಾರಕಿಹೊಳಿಯನ್ನು ಕೆರಳಿ ಕೆಂಡವಾಗುವಂತೆ ಮಾಡಿದೆ..
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿಜಕ್ಕೂ ನಡೆದಿದ್ದೇನು..?
ಸಿಎಲ್ಪಿ ಸಭೆಯನ್ನುದ್ದೇಶಿಸಿ ಡಿಸಿಎಂ ಡಿಕೆ.ಶಿವಕುಮಾರ್ (DK.Shivakumar)ಮಾತನಾಡುತ್ತಿದ್ರು. ಈ ವೇಳೆ, ನೂತನ 100 ಕಚೇರಿಗಳ ಸ್ಥಾಪನೆ ವಿಚಾರವಾಗಿ ಮಾತನಾಡುತ್ತಾ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ನಿರ್ಮಿಸಿದ್ದಾರೆಂದು ಹೇಳಿದರು. ಇದಕ್ಕೆ ಸತೀಶ್ ಜಾರಕಿಹೊಳಿ ಆಕ್ಷೇಪ ಎತ್ತಿದರು. ಪದೇ ಪದೇ ಕಾಂಗ್ರೆಸ್ ಕಚೇರಿಯನ್ನು ಹೆಬ್ಬಾಳ್ಕರ್ ಕಟ್ಟಿದರು ಅಂತಾ ಹೇಳಬೇಡಿ. ಈ ವಿಚಾರವನ್ನು ಒಂದ್ಸಲ ಕೇಳಿಸಿಕೊಂಡುಬಿಡಿ. ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಲು ಜಾಗ ಕೊಟ್ಟಿದ್ದು, ಈಗಿನ ಬಿಜೆಪಿ ಶಾಸಕ ನಮ್ಮ ಸೋದರ ರಮೇಶ್ ಜಾರಕಿಹೊಳಿ. ಕಟ್ಟಡ ಕಟ್ಟಲು ಮೂರು ಕೋಟಿ ಹಣ ಸುರಿದಿದ್ದು ನಾನು.. ಇಲ್ಲಿ ಪದೇ ಪದೇ ಹೆಬ್ಬಾಳ್ಕರ್ ಕಟ್ಟಿದ್ರು, ಹೆಬ್ಬಾಳ್ಕರ್ ಕಟ್ಟಿದ್ರು ಅಂತ ಹೇಳಿ ಅವಮಾನಿಸಬೇಡಿ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಹೆಬ್ಬಾಳ್ಕರ್, ಜವಾಬ್ದಾರಿ ತೆಗೆದುಕೊಳ್ಳುವಾಗ ಅಲ್ಲಿ ಸರಿಯಾಗಿ ವಿದ್ಯುತ್ ಕೂಡ ಇರಲಿಲ್ಲ. ಕನಿಷ್ಠ ಮೂಲಸೌಕರ್ಯವೂ ಇರಲಿಲ್ಲ. ನಾನು ಮೊದಲ ಬಾರಿ ಸಚಿವೆಯಾಗಿ, ಜಿಲ್ಲೆಯಲ್ಲಿ ಕಡಿಮೆ ಅವಧಿಯಲ್ಲಿ ಪಕ್ಷದ ಕಚೇರಿ ನಿರ್ಮಾಣ ಮಾಡಲಾಗಿದೆ ಅಂತಾ ಸಮರ್ಥಿಸಿಕೊಳ್ಳಲು ಮುಂದಾದರು. ಇದಕ್ಕೆ ಮತ್ತೆ ಅಸಮಾಧಾನಗೊಂಡ ಸತೀಶ್, ಜಾಗ ಕೊಟ್ಟಿದ್ದು ನಾನು, ನಂತರ ಪಕ್ಷದ ಕಚೇರಿ ನಿರ್ಮಾಣ ಆಗಿದೆ ಅಂತಾ ಹೇಳಿದರು..
ತಾರಕಕ್ಕೇರಿದ ಫೈಟ್.. ಸಿಎಂ, ಡಿಸಿಎಂ ಮಧ್ಯಪ್ರವೇಶ..!
ಇನ್ನು, ಸತೀಶ್ ಜಾರಕಿಹೊಳಿ (Satish Jarkiholi)ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ವಾಗ್ಯುದ್ಧ ತೀವ್ರ ಸ್ವರೂಪ ಪಡೆಯುತ್ತಿತ್ತು.. ಈ ವೇಳೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಮಧ್ಯಪ್ರವೇಶಿಸಿ, ಪರಿಸ್ಥಿತಿ ಶಾಂತಗೊಳಿಸಿದರು ಅಂತಾ ಹೇಳಲಾಗ್ತಿದೆ. ಡಿಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಹೈಕಮಾಂಡ್ ನಿರ್ಧಾರಗಳನ್ನು ಪಾಲಿಸಬೇಕು. ಪಕ್ಷದ ಹಿತಾಸಕ್ತಿಯೇ ಮುಖ್ಯ ಅಂತಾ ಎಲ್ಲಾ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು. ಇದೇ ವಿಚಾರವಾಗಿ ಮಾತಾಡಿದ ಗೃಹ ಸಚಿವ ಪರಮೇಶ್ವರ್, ಹೆಬ್ಬಾಳ್ಕರ್ ಮಾತಿಗೆ ಸತೀಶ್ ಅಸಮಾಧಾನಗೊಂಡಿದ್ದು ನಿಜ ಅಂತಾ ಹೇಳಿದರು.
ಡಿಕೆಶಿ ವಿರುದ್ಧವೇ ಸಿಡಿದೆದ್ದರಾ ಸತೀಶ್ ಜಾರಕಿಹೊಳಿ..?
ಇನ್ನು, ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿರೋದು ಹೊಸದೇನಲ್ಲ.. ಈಗಲೂ ಡಿಕೆಶಿ ಎಂಟ್ರಿಯಿಂದ ಕಾಂಗ್ರೆಸ್ ಭವನದ ವಿಚಾರವಾಗಿ ಕಿಚ್ಚು ಹೊತ್ತಿಕೊಂಡಿದೆ. ಬೆಳಗಾವಿ ರಾಜಕಾರಣದಲ್ಲಿ ಪರೋಕ್ಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಜಾರಕಿಹೊಳಿ ಕುಟುಂಬ ಮಾಡುತ್ತಿದೆ. ಆದರೆ ಇದೀಗ ಸಿಎಲ್ಪಿ ಸಭೆಯಲ್ಲಿ ಇದು ಬಹಿರಂಗಗೊಂಡಿದ್ದು, ಸೈಲೆಂಟ್ ಆಗಿರುತ್ತಿದ್ದ ಸತೀಶ್ ಜಾರಕಿಹೊಳಿ ಏಕಾಏಕಿ ಸಿಡಿದೆದ್ದಿದ್ದಾರೆ..
ಒಟ್ನಲ್ಲಿ, ತಣ್ಣಗಿದ್ದ ಕುಂದಾನಗರಿ ಕಿಚ್ಚು ಈಗ ಮತ್ತೊಮ್ಮೆ ಸ್ಫೋಟಗೊಂಡಿದೆ.. ಕಾಂಗ್ರೆಸ್ ಭವನದ ವಿಚಾರವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ವಾಗ್ಯುದ್ಧ ತೀವ್ರಗೊಂಡಿದೆ.. ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡ್ಬೇಕು..
ಬ್ಯೂರೋ ರಿಪೋರ್ಟ್ ಬಾಸ್ ಟಿವಿ ಕನ್ನಡ.
5 Comments
Yas 👍👍
Job
[email protected]
Sagar
Dinesh Kumar G L
Y N HOSAKOTE