BosstvKannada

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧ : ಹೈಕೋರ್ಟ್‌ ಮೆಟ್ಟಿಲೇರಿದ್ದ ಪ್ರತಾಪ್‌ ಸಿಂಹಗೆ ಮುಖಭಂಗ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಮಾಜಿ ಸಂಸದ ಪ್ರತಾಪ್‌ ಸಿಂಹಗೆ ಮುಖಭಂಗವಾಗಿದೆ. ಬಾನು ಮುಷ್ತಾಕ್ ಆಯ್ಕೆ ವಿರುದ್ಧ ಸಲ್ಲಿಸಿದ್ದ ಪಿಐಎಲ್‌ ವಜಾ ಮಾಡುವುದರ ಜೊತೆಗೆ ಧರ್ಮದ ಮಧ್ಯೆ ಕಂದಕ ಸೃಷ್ಟಿಸುವವರಿಗೆ ಹೈಕೋರ್ಟ್‌ ಖಡಕ್‌ ವಾರ್ನಿಂಗ್‌ ಮಾಡಿದೆ. ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಪಿಐಎಲ್‌ಯನ್ನ ಸಿಜೆ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ಪೀಠ ವಜಾಗೊಳಿಸಿದೆ. ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ, ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದಿದ್ದಾರೆ.

ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದ್ದು ಸರಿಯಲ್ಲ. ಅವರು ಹಿಂದೂ ವಿರೋಧಿ, ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪರ ವಕೀಲ ಸುದರ್ಶನ್ ವಾದ ಮಂಡಿಸಿದರು. ಇದಕ್ಕೆ ಉತ್ತರ ನೀಡಿದ ದ್ವಿಸದಸ್ಯರ ಪೀಠ ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಯಿಂದ ಸಂವಿಧಾನ ನೀಡಿರುವ ಯಾವ ಹಕ್ಕು ಉಲ್ಲಂಘನೆಯಾಗಿಲ್ಲ. ಇದು ರಾಜ್ಯದ ಹಬ್ಬವಾಗಿದ್ದು, ಸರ್ಕಾರದ ನಿರ್ಧಾರವು ಸಂವಿಧಾನದ 15ನೇ ವಿಧಿಗೆ ಪೂರಕವಾಗಿದೆ. ಎಲ್ಲಾ ದೇವಸ್ಥಾನಗಳಲ್ಲಿ ಎಲ್ಲರಿಗೂ ಅನುಮತಿ ಇದೆ ಎಂದು ಬರೆಯಲಾಗಿದೆ. ದಸರಾ ಸಮಿತಿಯಲ್ಲಿನ 62 ಮಂದಿಯ ಅಭಿಪ್ರಾಯವನ್ನು ಪರಿಗಣಿಸಿ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಲಾಗಿದೆ. ಸಮಿತಿಯಲ್ಲಿ ಎಲ್ಲಾ ಪಕ್ಷದ ನೇತಾರರು ಇದ್ದಾರೆ. ಗೌರವಾನ್ವಿತ ಲೇಖಕಿ ಬಾನು ಮುಷ್ತಾಕ್‌ ಅವರನ್ನು ಕನ್ನಡ ವಿರೋಧಿ ಎಂದು ಹೇಳಿರುವುದು ಆಘಾತಕಾರಿ ಬೆಳವಣಿಗೆ. ಹಿಂದೂ-ಮುಸ್ಲಿಮ್‌ ಎಂದು ಕಂದಕ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕು. ಇದನ್ನು ಮೊಳಕೆಯಲ್ಲೇ ಚಿವುಟಬೇಕು. ನಿಸಾರ್‌ ಅಹ್ಮದ್‌ ಅವರು ದಸರಾ ಉದ್ಘಾಟಕರಾಗಿದ್ದಾಗ ಸಂಸದರಾಗಿ ಪ್ರತಾಪ್‌ ಸಿಂಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದು ರಾಜ್ಯದ ಜಾತ್ಯತೀತ ಕಾರ್ಯಕ್ರಮ. ಇದನ್ನು ಧಾರ್ಮಿಕ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿದೆ ಎಂದು ಸಿಜೆ ವಿಭು ಬಖ್ರು ಹೇಳಿದರು.

Read Also : 2025ರ ವಕ್ಫ್ ತಿದ್ದುಪಡಿ ಕಾಯ್ದೆ : ಕೆಲವೊಂದು ಅಂಶಗಳಿಗೆ ಸುಪ್ರೀಂಕೋರ್ಟ್‌ ತಡೆ!

Exit mobile version