144 ವರ್ಷಗಳ ಬಳಿಕ ಅಪರೂಪದ ಮಹಾ ಕುಂಭಮೇಳ(Maha Kumbh Mela)
ಗಂಗಾ(Ganga), ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿಂದು ಮೊದಲ ಧಾರ್ಮಿಕ ಸ್ನಾನ ಅಥವಾ ಶಾಹಿ ಸ್ನಾನದೊಂದಿಗೆ 45 ದಿನಗಳ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳ ಶುಭಾರಂಭಗೊಂಡಿದೆ. ಐತಿಹಾಸಿಕ ಕುಂಭಮೇಳಕ್ಕೆ ಪ್ರಯಾಗ್ರಾಜ್ ಸಿದ್ಧಗೊಂಡಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ಈ ಕಾರಣದಿಂದ ಇದನ್ನು ಮಹಾಕುಂಭ ಮೇಳ (Maha Kumbh Mela) ಎಂದು ಕರೆಯಲಾಗುತ್ತದೆ. ಇಂದು ಕುಂಭಮೇಳ ಆರಂಭಗೊಂಡಿದೆ. ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆಯಲ್ಲಿ 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವ ಕುಂಭಮೇಳದಲ್ಲಿ ಸುಮಾರು 45 ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ.





ಮಹಾಕುಂಭ ಮೇಳವು ಇಂದಿನಿಂದ ಪ್ರಯಾಗರಾಜ್ನಲ್ಲಿ ಪ್ರಾರಂಭವಾಗಿದ್ದು, ಇದು ಮಹಾಶಿವರಾತ್ರಿಯಂದು (Mahashivratri) ಫೆಬ್ರವರಿ 26 ರಂದು ಕೊನೆಗೊಳ್ಳಲಿದೆ. ಈ ಮಹಾಕುಂಭ ಜಾತ್ರೆಯಲ್ಲಿ ಪುಣ್ಯನದಿಯಲ್ಲಿ ಸ್ನಾನ ಮಾಡಲು ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ಈ ಸಮಯದಲ್ಲಿ, ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ, ಇದರಲ್ಲಿ ಮೊದಲು ಋಷಿಗಳು ಮತ್ತು ಸಂತರು ಮತ್ತು ನಂತರ ಸಾಮಾನ್ಯ ಜನರು ಸ್ನಾನ ಮಾಡುತ್ತಾರೆ. ಮಹಾಕುಂಭ ಸ್ನಾನವು ಎಲ್ಲಾ ರೀತಿಯ ತೊಂದರೆಗಳನ್ನು ತೊಡೆದುಹಾಕುತ್ತದೆ ಮತ್ತು ಪಾಪಗಳಿಂದ ಮುಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. 30-45 ದಿನಗಳ ಕಾಲ ನಡೆಯುವ ಮಹಾಕುಂಭವು ಹಿಂದೂಗಳಿಗೆ ಹೆಚ್ಚಿನ ಮಹತ್ವವನ್ನು ಹೊಂದಿದೆ.
ಮಹಾ ಕುಂಭಮೇಳದಲ್ಲಿ(Maha Kumbh Mela) ಅಮಲು ಪದಾರ್ಥಗಳ ಸೇವನೆಯನ್ನು ನಿಷೇಧಿಸಲಾಗಿದೆ. 10 ಸಾವಿರ ಎಕರೆ ಪ್ರದೇಶಗಳಲ್ಲಿ ಅಭೂತಪೂರ್ವ ವ್ಯವಸ್ಥೆಯಾಗಿದ್ದು, ವಿಶೇಷವಾಗಿ ಶುಚಿತ್ವ, ಭದ್ರತೆಗೆ ಪ್ರಾಶಸ್ತ್ಯ ನೀಡಿ ಆಧುನಿಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಶೌಚಾಲಯಗಳ ಶುಚಿತ್ವವನ್ನು ನಿರ್ವಹಿಸಲು ಭಕ್ತರ ಅನುಕೂಲಕ್ಕಾಗಿ ಡಿಜಿಟಲ್ ಟೂರಿಸಂ ಮ್ಯಾಪ್ ಇದೆ. ಸ್ಮಾರ್ಟ್ಫೋನ್ಗಳ ಮೂಲಕ ಕೃತಕ ಬುದ್ಧಿಮತ್ತೆ ಆಧಾರಿತ ಭದ್ರತಾ ವ್ಯವಸ್ಥೆಯನ್ನು ಸಂಯೋಜಿಸಲಾಗಿದೆ. ಈ ಕಾರ್ಯಕ್ರಮವು ಪ್ರಯಾಗ್ರಾಜ್ ಅನ್ನು ವಿಶ್ವದ ಅತಿ ದೊಡ್ಡ ತಾತ್ಕಾಲಿಕ ನಗರವನ್ನಾಗಿಯೂ ಮಾರ್ಪಡಿಸಲಿದ್ದು, ಏಕಕಾಲದಲ್ಲಿ 50 ಲಕ್ಷದಿಂದ 1 ಕೋಟಿ ಜನರವರೆಗೂ ಜನ ಸೇರಲು ಸಾಧ್ಯವಿದೆ .
ಸಂಗಮ ಪ್ರದೇಶ ಮತ್ತು ಫಾಫಮಾದಲ್ಲಿ ಜನರು ಓಡಾಡಲು ಸುಮಾರು 30 ಫಂಟೂನ್ ಸೇತುವೆಗಳನ್ನು ನಿರ್ಮಿಸಲಾಗಿದೆ. ಧಾರ್ಮಿಕ ನಗರ ಪ್ರವೇಶ ಪ್ರದೇಶಗಳಲ್ಲಿ ಜನರನ್ನು ಸ್ವಾಗತಿಸಲು ಬೃಹತ್ ಗೇಟುಗಳನ್ನು ಅಳವಡಿಸಲಾಗಿದೆ. 10,000 ಹೆಕ್ಟೇರ್ಗಳ ವಿಶಾಲ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಮಹಾ ಕುಂಭಮೇಳದ ಯಶಸ್ಸಿಗಾಗಿ ಉತ್ತರ ಪ್ರದೇಶದ ಸರ್ಕಾರ ಈಗಾಗಲೇ 9,000 ಕೋಟಿ ರೂ. ಅನುದಾನ ನೀಡಿದೆ. ಕೋಟ್ಯಂತರ ಭಕ್ತರಿಗಾಗಿ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್ಗಳನ್ನು ನಿರ್ಮಿಸಲಾಗಿದ್ದು, 400 ಕಿಮೀಗೂ ಹೆಚ್ಚು ತಾತ್ಕಾಲಿಕ ರಸ್ತೆಗಳನ್ನು ರಚಿಸಲಾಗಿದೆ. 69,000 ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಭಕ್ತರಿಗೆ ರಾತ್ರಿ ವೇಳೆಯೂ ಸೂಕ್ತವಾದ ರಕ್ಷಣೆ ಇರಲಿದೆ.
ಕುಂಭ ಮೇಳದ ಪುಣ್ಯ ಸ್ನಾನದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಉದ್ದಕ್ಕೂ 12 ಕಿಲೋ ಮೀಟರ್ ಘಾಟ್ಗಳನ್ನು ನಿರ್ಮಿಸಲಾಗಿದೆ. ಈಗಾಗಲೇ 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಾ ಕುಂಭ ಮೇಳ ಹಿನ್ನೆಲೆಯಲ್ಲಿ ನಗರದ 29 ದೇವಾಲಯಗಳನ್ನು ನವೀಕರಿಸಲಾಗಿದೆ. 1,800 ಹೆಕ್ಟೇರ್ ಪ್ರದೇಶವನ್ನು ವಾಹನಗಳ ಪಾರ್ಕಿಂಗ್ಗಾಗಿ ಕಾಯ್ದಿರಿಸಲಾಗಿದೆ.