ಬೆಂಗಳೂರು : ಪತಂಜಲಿ ತುಪ್ಪ ಕ್ವಾಲಿಟಿ ಟೆಸ್ಟ್‌ನಲ್ಲಿ ಫೇಲ್ ಆಗಿದೆ. ಭಾರತದ ಪ್ರಮುಖ ಕಂಪನಿಗಳಲ್ಲಿ ಪತಂಜಲಿ ಕೂಡ ಒಂದಾಗಿದ್ದು, ಇಂಡಿಯನ್ ಬ್ರ್ಯಾಂಡ್ ಎಂಬ ಕಾರಣಕ್ಕೆ ಹಲವರು ಪತಂಜಲಿ ಪ್ರಾಡಕ್ಟ್‌ಗಳನ್ನ ಬಳಸ್ತಿದ್ದಾರೆ. ಆದ್ರೆ, ಈ ಪತಂಜಲಿ ತುಪ್ಪವು ಕಲಬೆರಕೆಯಾಗಿದೆ ಅಂತಾ ರಾಜ್ಯ ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳು ದೃಢಪಡಿಸಿವೆ. 2020ರಲ್ಲಿ ಉತ್ತರಾಖಂಡದ ಕರಣ್ ಜನರಲ್ ಸ್ಟೋರ್‌ನಿಂದ ಹಿರಿಯ ಆಹಾರ ಅಧಿಕಾರಿಯೊಬ್ಬರು ಪತಂಜಲಿ ತುಪ್ಪವನ್ನ ತಪಾಸಣೆಗಾಗಿ ಖರೀದಿಸಿದ್ದರು. ಉತ್ತರಾಖಂಡದ ಪ್ರಯೋಗಾಲಯದಲ್ಲಿ ತುಪ್ಪವು ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸಿಲ್ಲ. ಹೀಗಾಗಿ ಅದು ಕಳಪೆ ಗುಣಮಟ್ಟದ್ದಾಗಿದೆ, ಈ ತುಪ್ಪವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಅನಾರೋಗ್ಯಕ್ಕೂ ಕಾರಣವಾಗಬಹುದು ಎಂದು ಪ್ರಯೋಗಾಲಯದ ವರದಿ ಬಹಿರಂಗಪಡಿಸಿತ್ತು.
ನಂತರ ಕಂಪನಿಯ ಅಧಿಕಾರಿಗಳು ಮಾದರಿಯನ್ನ ಕೇಂದ್ರ ಪ್ರಯೋಗಾಲಯದಲ್ಲಿ ಮರುಪರೀಕ್ಷೆ ಮಾಡುವಂತೆ ಒತ್ತಾಯಿಸಿದರು. ಹೀಗಾಗಿ 2021ರಲ್ಲಿ ಮರುಪರೀಕ್ಷೆ ಮಾಡಲಾಗಿತ್ತು. ಆದರೆ ಇದರಲ್ಲಿಯೂ ಕೂಡ ಪತಂಜಲಿ ತುಪ್ಪ ಫೇಲ್ ಆಗಿದೆ. ಹೀಗಾಗಿ ಪ್ರಕರಣವನ್ನ ದಾಖಲಿಸಲಾಗಿತ್ತು. ಇದೀಗ ಅದರ ತೀರ್ಪು ಪ್ರಕಟವಾಗಿದ್ದು, ಆರೋಪಿಗಳ ವಿರುದ್ಧ ತೀರ್ಪು ನೀಡಲಾಗಿದೆ. ಈ ತೀರ್ಪಿನಲ್ಲಿ ಉತ್ಪಾದಕ ಪತಂಜಲಿ ಆಯುರ್ವೇದ ಲಿಮಿಟೆಡ್ ವಿರುದ್ಧ 1,00,000 ರೂಪಾಯಿಗಳ ದಂಡ ವಿಧಿಸಲಾಗಿದೆ. ಇದಲ್ಲದೆ, ವಿತರಕ ಬ್ರಹ್ಮ್ ಆಕ್ಸೆಸರೀಸ್‌ಗೆ 25,000 ರೂಪಾಯಿಗಳ ದಂಡ, ಚಿಲ್ಲರೆ ವ್ಯಾಪಾರಿ ಕರಣ್ ಜನರಲ್ ಸ್ಟೋರ್‌ಗೆ 15,000 ರೂಪಾಯಿಗಳ ದಂಡ ವಿಧಿಸಲಾಗಿದೆ.

