ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ವಿಶ್ವಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ 5 ವರ್ಷಗಳೇ ಕಳೆದಿವೆ. ಆದರೂ ಅವರ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಸದ್ಯ, ಐಪಿಎಲ್ನಲ್ಲಿ ಮಾತ್ರ ಧೋನಿ ಕಾಣಿಸಿಕೊಳ್ಳುತ್ತಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಧೋನಿ ಅವರ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಐಸಿಸಿಯ ಮೂರು ಕಪ್ ಗೆದ್ದ ವಿಶ್ವದ ಏಕೈಕ ನಾಯಕ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ. ಕೇವಲ ಉತ್ತಮ ನಾಯಕ ಮಾತ್ರವಲ್ಲದೇ ಬೆಸ್ಟ್ ಫಿನಿಶರ್ ಜೊತೆಗೆ ಉತ್ತಮ ವಿಕೆಟ್ ಕೀಪರ್ ಆಗಿಯೂ ಹಲವಾರು ದಾಖಲೆಗಳನ್ನು ಅವರು ಬರೆದಿದ್ದಾರೆ. ಇದೀಗ ಧೋನಿ ರಾಜಕೀಯ ಎಂಟ್ರಿ ಕೊಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.

ಹೌದು, ಹಲವು ವರ್ಷಗಳಿಂದಲೂ ಧೋನಿ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಮತ್ತೆ ಈ ವಿಚಾರ ಮುನ್ನಲೆಗೆ ಬಂದಿದೆ. ಆದರೆ ಧೋನಿ ರಾಜಕೀಯ ಪ್ರವೇಶ ಮಾಡಲಿದ್ದಾರಾ ಎಂಬುದು ಎಷ್ಟು ಸತ್ಯ, ಧೋನಿ ರಾಜಕೀಯ ಪ್ರವೇಶಕ್ಕೆ ನಿರ್ಧಾರವಾಗಿದೆಯಾ ಎಂಬ ಪ್ರಶ್ನೆ ಮೂಡಿರೋದು ಸತ್ಯ…
ಧೋನಿ ರಾಜಕೀಯಕ್ಕೆ ಬರುತ್ತಾರೆ ಎಂದು ಹಲವು ದಿನಗಳಿಂದ ಊಹಾಪೋಹಗಳು ಹಬ್ಬಿವೆ. ಆದರೆ ಈ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajiv Shukla) ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಅವರು ರಾಜಕೀಯಕ್ಕೆ ಬಂದರೆ ಉತ್ತಮ ರಾಜಕಾರಣಿಯಾಗಬಲ್ಲರು ಎಂದು ಭವಿಷ್ಯ ನುಡಿದಿದ್ದಾರೆ. ರಾಜಕಾರಣಿಯಾಗಿ ಮಿಂಚುವ ಸಾಮರ್ಥ್ಯ ಧೋನಿಗಿದೆ. ಆದರೆ ರಾಜಕೀಯಕ್ಕೆ ಸೇರಬೇಕೆ ಅಥವಾ ಬೇಡವೇ ಎಂಬುದು ಅವರ ವೈಯಕ್ತಿಕ ನಿರ್ಧಾರವಾಗಿದೆ. ಅಲ್ಲದೆ ಧೋನಿ ಪಶ್ಚಿಮ ಬಂಗಾಳದಿಂದ ರಾಜಕೀಯಕ್ಕೆ ಬರುತ್ತಾರೆ ಎಂದು ನಾನು ಭಾವಿಸಿದ್ದೇವೆ. ಅವರು ರಾಜಕೀಯದಲ್ಲಿಯೂ ಮಿಂಚುವ ಸಾಮರ್ಥ್ಯ ಅವರಿಗಿದ್ದು, ಇಲ್ಲಿಯೂ ಸುಲಭವಾಗಿ ಗೆಲುವು ಸಾಧಿಸುತ್ತಾರೆ ಎಂದು ರಾಜೀವ್ ಶುಕ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ರಾಜೀವ್ ಶುಕ್ಲಾ (Rajiv Shukla) ಅವರು ಧೋನಿ ಜೊತೆ ಒಮ್ಮೆ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದೆ ಎಂದಿದ್ದಾರೆ. ಒಮ್ಮೆ ಧೋನಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವದಂತಿ ಹಬ್ಬಿತ್ತು. ಅದು ನಿಜವೆಂದು ಭಾವಿಸಿ ಮಾಹಿ ಜೊತೆ ಚರ್ಚಿಸಿದ್ದೆ. ಅದನ್ನು ಕೇವಲ ವದಂತಿ ಎಂದು ಮಾಹಿ ತಳ್ಳಿಹಾಕಿದ್ದರು ಅನ್ನೋದನ್ನು ಶುಕ್ಲಾ ತಿಳಿಸಿದ್ದಾರೆ.