BosstvKannada

ಬಿ.ಕೆ.ಹರಿಪ್ರಸಾದ್ ಜೊತೆಗೆ CM Siddaramaiah ಉಪಾಹಾರ ಭೇಟಿ : ರಾಜಕೀಯ ವಿದ್ಯಮಾನಗಳ ಚರ್ಚೆ

ರಾಜ್ಯ ರಾಜಕಾರಣದಲ್ಲಿ ಇವತ್ತು ಮಹತ್ವದ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ CM Siddaramaiah ಪಕ್ಷದ ಹಿರಿಯ ನಾಯಕರಾದ ಹರಿಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ. ಹರಿಪ್ರಸಾದ್ ಅವರ ನಿವಾಸಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ಉಪಹಾರ ಸೇವಿಸಿ ಕೆಲವು ಹೊತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿ ವಾಪಸ್ ಆಗಿದ್ದಾರೆ.

ನೆನ್ನೆ ರಾಜ್ಯಕ್ಕೆ ಎಐಸಿಸಿ ನಾಯಕರಾದ ರಂದೀಪ್ ಸುರ್ಜೇವಾಲಾ, ಕೆಸಿ ವೇಣುಗೋಪಾಲ್ ಭೇಟಿ ನೀಡಿದ್ದರು. ದೆಹಲಿ ನಾಯಕರ ಜೊತೆ ಸಿಎಂ ಚರ್ಚೆ ನಡೆಸಿದ್ದರು. ಬೆನ್ನಲ್ಲೇ ಹರಿಪ್ರಸಾದ್ ನಿವಾಸಕ್ಕೆ ಸಿದ್ದರಾಮಯ್ಯ ದೌಡಾಯಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಇಂದು ಬೆಳಗಿನ ಉಪಾಹಾರ ಮಾಡಿದ್ದು, ಸಾಮಾನ್ಯ ವಿಷಯಗಳ ಜೊತೆಗೆ ಮಂಗಳೂರಿನಲ್ಲಿ ಸೌಹಾರ್ದತೆ ನೆಲೆಸಬೇಕು, ದ್ವೇಷ ಯಾವುದೇ ಕಾರಣಕ್ಕೂ ಇರಬಾರದು ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹರಿಪ್ರಸಾದ್ ಅವರು ಬ್ರೇಕ್​ಫಾಸ್ಟ್​ಗೆ ಕರೆದಿದ್ದರು. ಬರುತ್ತೇನೆ ಎಂದಿದ್ದೆ, ಅದರಂತೆ ಇಲ್ಲಿಗೆ ಬಂದಿದ್ದೆ. ರಾಜಕೀಯ ಚರ್ಚೆ ಅಂತಲ್ಲ, ಜನರಲ್ ಆಗಿ ಚರ್ಚೆ ಮಾಡಿದ್ದೇವೆ. ಅದರಲ್ಲಿ ಮಂಗಳೂರು ವಿಚಾರ ಚರ್ಚೆಯಾಗಿದೆ. ಅಲ್ಲಿಗೆ ಸೌಹಾರ್ದತೆ ಬರಬೇಕು, ಹಿಂದೂಗಳು ಮುಸ್ಲಿಂ ನಡುವೆ ಯಾವುದೇ ದ್ವೇಷ ಇರಬಾರದು. ಸೌಹಾರ್ದತೆ ಬರಬೇಕು ಎಂದು ಚರ್ಚೆ ಮಾಡಿದ್ದೇವೆ. ನಾನು ಹರಿಪ್ರಸಾದ್​ಗೆ ಮಂಗಳೂರಿಗೆ ಹೋಗಿ ಬನ್ನಿ ಎಂದಿದ್ದೇನೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕಿಸಿ ಬನ್ನಿ ಎಂದಿದ್ದೇನೆ ಎಂದರು.

ಇನ್ನು ಕೋಮು ಗಲಭೆಗಳನ್ನು ಉಂಟುಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಕಾನೂನಿನ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು.ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದರು.

Also Read: ಕನ್ನಡಿಗರಿಗೆ Kamal Haasan ಕ್ಷಮೆಯಾಚಿಸದಿದ್ದರೆ ಸಿನಿಮಾ ಬ್ಯಾನ್‌ ಮಾಡಲು ಹೇಳುವೆ : ಸಚಿವ ಶಿವರಾಜ್ ತಂಗಡಗಿ

ಆ ಮೂಲಕ ರಾಜ್ಯದ ಹಿರಿಯ ನಾಯಕರ ವಿಶ್ವಾಸ ಗಳಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಬ್ರೇಕ್​ಫಾಸ್ಟ್ ನೆಪದಲ್ಲಿ ಹರಿಪ್ರಸಾದ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ನಾಯಕರು ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಹರಿಪ್ರಸಾದ್​ರನ್ನ ಸಭಾಪತಿ ಸ್ಥಾನದಲ್ಲಿ ಕೂರಿಸಲು ಮನವೊಲಿಕೆ ನಡೆಯುತ್ತಿದೆ. ಸಭಾಪತಿ ಸ್ಥಾನಕ್ಕೆ ಒಪ್ಪದಿದ್ದಲ್ಲಿ ಅಂತಿಮವಾಗಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.

ಡಿಸಿ ಸಿಇಒಗಳೊಂದಿಗೆ ಎರಡು ದಿನ ಸಭೆ

ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ನಡೆಯಲಿರುವ ಡಿ.ಸಿ.ಹಾಗೂ ಸಿಇಒ ಗಳ ಸಭೆಯಲ್ಲಿ ಮುಂಗಾರು ಮಳೆ ಪರಿಸ್ಥಿತಿಗಳ ಬಗ್ಗೆ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿಗಳು ತಿಳಿಸಿದರು.

Exit mobile version