ದೊಡ್ಮನೆಯಲ್ಲಿ ಅಸಮಾಧಾನಕ್ಕೆ ಕಾರಣವೇನು?
ದೊಡ್ಮನೆ ಸ್ಪರ್ಧಿಗೆ ಮಹಾ ಮೋಸ!, ಬಿಗ್ಬಾಸ್ ಮೇಲೆ ಶಾಕಿಂಗ್ ಆರೋಪ!, ಬಿಗ್ಬಾಸ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದೇಕೆ? ಅಷ್ಟಕ್ಕೂ ಬಿಗ್ಬಾಸ್ ಆಟ ಮೋಸನಾ? ಅದನ್ನ ಹೇಳ್ತೀವಿ.

ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ವಾರಕ್ಕೆ ಕಾಲಿಟ್ಟಿದೆ. ಮನೆಯೊಳಗೆ ಕಾಲಿಟ್ಟ ಇಪ್ಪತ್ತು ಜನರ ಪೈಕಿ ಕೇವಲ ಆರು ಸ್ಪರ್ಧಿಗಳು ಮೂರು ತಿಂಗಳ ಪಯಣವನ್ನು ಯಶಸ್ವಿಯಾಗಿ ಮುಗಿಸಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ರಜತ್, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ತಲುಪಿದ ಖುಷಿಯಲ್ಲಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಹೊತ್ತಲ್ಲೇ ಇದೀಗ ಪ್ರೇಕ್ಷಕರಿಗೆ ಬಿಗ್ ಬಾಸ್ ಮೇಲೆ ಅಸಮಾಧಾನ-ಅನುಮಾನ ಎರಡೂ ಮೂಡಿದೆ. ಮೊದಲಿನಿಂದಲೂ ಸ್ಕ್ರಿಪ್ಟೆಡ್ ಎನ್ನುವ ಆರೋಪ ಹೊತ್ತಿದ್ದ ಬಿಗ್ ಬಾಸ್ ಈ ಸೀಸನ್ನಲ್ಲಿ ಅದನ್ನು ಸಾಬೀತು ಪಡಿಸಿದಂತಿದೆ. ಈ ಬಾರಿ ಬಿಗ್ ಬಾಸ್ ತಂಡ ಪಕ್ಷಪಾತ ಮಾಡಿದೆ. ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ತಂಡಕ್ಕೆ ಬೇಕಾದ ಸ್ಪರ್ಧಿಗಳನ್ನು ಮಾತ್ರ ಫಿನಾಲೆಗೆ ಕರೆದುಕೊಂಡು ಹೋಗಲಾಗಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ..

ಬಿಗ್ ಬಾಸ್(BIGG BOSS) ತಂಡಕ್ಕೆ ಬೇಕಾದ ಸ್ಪರ್ಧಿಗಳಿಗೆ ಮಾತ್ರ ಕ್ಷಮೆ, ಉಳಿದವರಿಗೆ ಶಿಕ್ಷೆ. ಇಷ್ಟೆಲ್ಲಾ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿರುವುದು ಧನರಾಜ್ ಎಲಿಮಿನೇಷನ್(Elimination). ಈ ವಾರ ಮನೆಯಿಂದ ಹೊರ ಬಂದು, ಕೂದಲೆಳೆ ಅಂತರದಲ್ಲಿ ಫಿನಾಲೆ ವಾರದ ಅವಕಾಶ ಕಳೆದುಕೊಂಡ ಧನರಾಜ್ ಕಪ್ ಗೆಲ್ಲದಿದ್ದರೂ, ಜನರು ಮನಸು ಗೆದ್ದಿರುವುದಂತೂ ಸತ್ಯ. ಹೀಗಾಗಿ ಕೆಲ ಪ್ರೇಕ್ಷಕರು ಬಿಗ್ ಬಾಸ್ ನಿರ್ಧಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮಹತ್ವದ ವಾರವಾದ ಕಾರಣ ಎಲ್ಲಾ ಸ್ಪರ್ಧಿಗಳು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿ ಆಟವಾಡಿದ್ದಾರೆ. ಈ ಪೈಕಿ ಧನರಾಜ್ ಕೂಡ ಒಬ್ಬರು. ವಾರದ ಮೊದಲೇ ಮಿಡ್ ವೀಕ್ ಎಲಿಮಿನೇಷನ್ (Elimination) ಘೋಷಣೆ ಮಾಡಿದ್ದ ಬಿಗ್ ಬಾಸ್, ಧನರಾಜ್ ಸೇಫ್ ಆಗುತ್ತಿದ್ದಂತೆ ಈ ಎಲಿಮಿನೇಷನ್ ಪ್ರಕ್ರಿಯೆಯನ್ನು ರದ್ದು ಮಾಡಿತು. ಧನರಾಜ್ ಟಾಸ್ಕ್ನಲ್ಲಿ ಕನ್ನಡಿ ನೋಡಿ ಪೂರ್ಣಗೊಳಿಸಿದರು ಅನ್ನೋ ಕಾರಣ ಕೊಟ್ಟು ಮಿಡ್ ವೀಕ್ ಎಲಿಮಿನೇಷನ್ ರದ್ದು ಮಾಡಿದ್ದ ಬಿಗ್ ಬಾಸ್, ಕೊನೆಗೆ ಧನರಾಜ್ ಸ್ವತಃ ನನ್ನನ್ನು ನಾಮಿನೇಷನ್ನಲ್ಲಿ ಸೇರಿಸಿಕೊಳ್ಳಿ ಅಂತಾ ಹೇಳಿದ ಬಳಿಕ ಮತ್ತೆ ನಾಮಿನೇಷನ್ ಪ್ರಕ್ರಿಯೆಗೆ ಅವಕಾಶ ಮಾಡಿಕೊಟ್ಟರು.

ಈ ಹಿಂದೆ ಅನೇಕ ಸ್ಪರ್ಧಿಗಳು ಆಟದಲ್ಲಿ ತಪ್ಪು ಮಾಡಿ ಗೆದ್ದಿದ್ರು. ಅದರಲ್ಲೂ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭವ್ಯ ಗೌಡ ಮಾಡಿದ ತಪ್ಪು ಬಟಾಬಯಲಾಗಿತ್ತು. ಆದರೂ ಕ್ಷಮೆ ನೀಡಿದ ಬಿಗ್ ಬಾಸ್ ತಂಡ ಅವರನ್ನೇ ಆ ವಾರ ಕ್ಯಾಪ್ಟನ್ಸಿಯಲ್ಲಿ ಮುಂದುವರಿಸಿದ್ದರು. ಇನ್ನು ಕಳೆದ ವಾರ ಆಟದಲ್ಲಿ ತಪ್ಪು ಮಾಡಿದ ತ್ರಿವಿಕ್ರಮ್ಗೂ ಮತ್ತೊಂದು ಅವಕಾಶ ಕೊಡಲಾಯಿತು. ಆದರೆ ಧನರಾಜ್ ಪಾಲಿಗೆ ಕ್ಷಮೆಯೂ ಇಲ್ಲ. ಮತ್ತೆ ಆಟವಾಡುವ ಅವಕಾಶವೂ ಇಲ್ಲ. ಬದಲಿಗೆ ಸಿಕ್ಕಿದ್ದು ಎಲಿಮಿನೇಷನ್(Elimination). ಇದು ಪ್ರೇಕ್ಷಕರನ್ನು ಬಹಳ ಕಾಡುತ್ತಿದೆ. ಮೊದಮೊದಲು ಅಷ್ಟರ ಮಟ್ಟಿಗೆ ಇತರ ಸ್ಪರ್ಧಿಗಳಿಗೆ ಎದುರಾಳಿಯಾಗದ ಧನರಾಜ್, ಹನುಮಂತ ಬಂದ ಬಳಿಕ ಇತರ ಸ್ಪರ್ಧಿಗಳಿಗೆ ಕಠಿಣ ಎದುರಾಳಿಯಾದರು. ಟಾಸ್ಕ್, ಮನರಂಜನೆ, ವ್ಯಕ್ವಿತ್ವ, ಪ್ರಾಮಾಣಿಕತೆ ಎಲ್ಲದರಲ್ಲಿಯೂ ಉತ್ತಮ ಎನಿಸಿಕೊಂಡಿದ್ರು. ಅಷ್ಟು ಮಾತ್ರವಲ್ಲದೇ ಕಿಚ್ಚನ ಚಪ್ಪಾಳೆಯನ್ನು ಕೂಡ ಪಡೆದಿದ್ದ ಧನರಾಜ್, ಕೂದಲೆಳೆ ಅಂತರದಲ್ಲಿ ಫಿನಾಲೆ ವಾರದ ಅವಕಾಶ ಕಳೆದುಕೊಂಡಿದ್ದಾರೆ. ಹಾಗಾದರೆ ಧನರಾಜ್ಗಿಂತ ಫಿನಾಲೆಗೆ ಅರ್ಹರಲ್ಲದ ಸ್ಪರ್ಧಿಗಳು ನಾಮಿನೇಷನ್ನಲ್ಲಿ ಇರಲಿಲ್ಲವೇ? ವೋಟಿಂಗ್ ಲೈನ್ ತೆರೆದಿದೆ ಎಂದಾದ ಮೇಲೆ ಧನರಾಜ್ಗೆ ಎಷ್ಟು ವೋಟ್ ಬಿದ್ದಿರಬಹುದು? ಎನ್ನುವ ಪ್ರಶ್ನೆಗೆಗಳು ಬಿಗ್ಬಾಸ್ ಅಭಿಮಾನಿಗಳನ್ನು ಕಾಡುತ್ತಿದೆ. ಇದೇ ಕಾರಣಕ್ಕಾಗಿಯೇ ಈಗ ಬಿಗ್ಬಾಸ್ ಸ್ಕ್ರಿಪ್ಟೆಡ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ..