ರಾಜ್ಯ ಕಾಂಗ್ರೆಸ್ನಲ್ಲೀಗ ಮತ್ತೊಂದು ಸುತ್ತಿನ ವಾರ್ ಶುರುವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್(DK Sivakumar) ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ತಣ್ಣಗಾಗಿದ್ದ ಹೊಗೆ ಈಗ ಜ್ವಾಲೆಯಾಗಿ ಧಗಧಗಿಸುತ್ತಿದೆ. ಇದರ ಪರಿಣಾಮ ಏನಾಗಿದೆ ಅಂದ್ರೆ ಬ್ರೇಕ್ ಬಿದ್ದಿದ್ದ ಸತೀಶ್ ಜಾರಕಿಹೊಳಿಯವರ ದುಬೈ ಪ್ರವಾಸದ ಪ್ಲ್ಯಾನ್ ಮತ್ತೆ ಚಾಲ್ತಿಗೆ ಬಂದಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಂಚಲನ ಸೃಷ್ಟಿಯಾಗಿದೆ.
ಡಿಕೆಶಿ-ಸತೀಶ್ ಮಧ್ಯೆ ಮತ್ತೊಂದು ಸುತ್ತಿನ ಯುದ್ಧ..!
ಬೆಳಗಾವಿ ರಾಜಕೀಯಕ್ಕೆ ಡಿಸಿಎಂ ಡಿಕೆಶಿ ಎಂಟ್ರಿ ಕೊಟ್ಟ ಬೆನ್ನಲ್ಲೇ ಬಿರುಸುಗೊಂಡಿದ್ದ ಬಣ ಕಿತ್ತಾಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೈಕಮಾಂಡ್ ಮಧ್ಯ ಪ್ರವೇಶ ಮತ್ತು ವಾರ್ನಿಂಗ್ ಬಳಿಕ ತುಸು ತಣ್ಣಗಾದಂತೆ ಕಂಡಿದ್ದ ಬಣ ಸಂಘರ್ಷ ಈಗ ಮತ್ತೆ ಮುನ್ನೆಲೆಗೆ ಬರುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ. ಯಾಕಂದ್ರೆ, ಸಚಿವ ಸತೀಶ್(Satish Jarakiholi) ಜಾರಕಿಹೊಳಿ ಬಣದ 15 ಶಾಸಕರ ತಂಡ ತೆರೆ ಮರೆಯಲ್ಲೇ ದುಬೈ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ..


ಡಿಕೆಶಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸತೀಶ್ ಜಾರಕಿಹೊಳಿ
ಕಾಂಗ್ರೆಸ್ನಿಂದ ಇತ್ತೀಚೆಗಷ್ಟೇ ಗಾಂಧಿ ಭಾರತ ಸಮಾವೇಶ ನಡೀತು. ಈ ವೇಳೆ, ಮೊದಲ ಬಾರಿಗೆ ಗೆದ್ದಿರುವ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಪ್ಲ್ಯಾನ್ ನಡೆದಿತ್ತು. ಈ ವಿಚಾರ ಕಾಂಗ್ರೆಸ್ ಸಮಾವೇಶದ ಹೊತ್ತಿನಲ್ಲಿ ಚರ್ಚೆಯಾಗಿ ಆ ನಂತರ ಬ್ರೇಕ್ ಬಿದ್ದಿತ್ತು.. ಆದ್ರೀಗ ಮತ್ತೆ ಆ ವಿಚಾರ ಮುನ್ನೆಲೆಗೆ ಬಂದಿದೆ. ದುಬೈ ಪ್ರವಾಸಕ್ಕೆ ಮರುಜೀವ ನೀಡಿರುವ ಸತೀಶ್ ಜಾರಕಿಹೊಳಿ, ಡಿಕೆಶಿ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಡಿಕೆಶಿ ವಿರುದ್ಧ ಸತೀಶ್ ಮತ್ತೆ ಸಿಡಿದೇಳಲು ಕಾರಣವೇನು..?
ಡಿ.ಕೆ.ಶಿವಕುಮಾರ್(DK Sivakumar) ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಿದ್ದೇ ಅದೊಂದು ಕಾಮಗಾರಿ. ಹೌದು.. ಬೆಳಗಾವಿಯ ಹಿಡಕಲ್ ಡ್ಯಾಮ್ ಪೈಪ್ಲೈನ್ ಕಾಮಗಾರಿಗೆ ಟೆಂಡರ್ ಅನುಮೋದನೆ ನೀಡಲಾಗಿದೆ. ಹಿಡಕಲ್ ಡ್ಯಾಮ್ನಿಂದ ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡುವ 300 ಕೋಟಿ ರೂ. ಮೊತ್ತದ ಕಾಮಗಾರಿ ಟೆಂಡರ್ಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆಶಿ ಕಾಮಗಾರಿ ಆರಂಭಿಸಲು ಸೈಲೆಂಟಾಗಿಯೇ ಚಾಲನೆ ನೀಡಿದ್ದಾರೆ.. ಈ ನಡೆ ಸತೀಶ್ ಜಾರಕಿಹೊಳಿ(Satish Jarakiholi) ಅವರನ್ನು ಕೆರಳಿಸಿದೆ. ಟೆಂಡರ್ಗೆ ಏಕಪಕ್ಷೀಯವಾಗಿ ಅನುಮೋದನೆ ನೀಡಿದ್ದಾರೆ ಅಂತಾ ಡಿಕೆಶಿ ವಿರುದ್ಧ ಸತೀಶ್ ಕೆರಳಿ ಕೆಂಡವಾಗಿದ್ದಾರೆ..
ಕಾಮಗಾರಿ ನಿಲ್ಲಿಸಲು ಜಿಲ್ಲಾಧಿಕಾರಿಗೆ ಸತೀಶ್ ಸೂಚನೆ!
ಡಿಕೆಶಿ ವಿರುದ್ಧದ ಮುಂದುವರಿದ ಭಾಗವಾಗಿಯೇ ಸತೀಶ್ ಜಾರಕಿಹೊಳಿಯವರು ಜಿಲ್ಲಾಧಿಕಾರಿಗೆ ಖಡಕ್ ಸೂಚನೆ ನೀಡಿದ್ದಾರೆ. ಹಿಡಕಲ್ ಡ್ಯಾಮ್ ಪೈಪ್ಲೈನ್ ಕಾಮಗಾರಿ ನಿಲ್ಲಿಸುವಂತೆ ಸತೀಶ್ ಸೂಚಿಸಿದ್ದಾರೆ. ಇದು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ನಡುವಿನ ಸಂಘರ್ಷವನ್ನು ಮತ್ತೆ ಮುನ್ನೆಲೆಗೆ ತರುವ ಎಲ್ಲ ಸಾಧ್ಯತೆಗಳಿವೆ. ಡಿಕೆ ಶಿವಕುಮಾರ್ ನಿರ್ಧಾರಗಳಿಂದ ಆಕ್ರೋಶಗೊಂಡಿರುವ ಸತೀಶ್, ತಮ್ಮ ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಫೆಬ್ರವರಿ ಮೊದಲ ವಾರದವರೆಗೆ ಸುಮ್ಮನಿರಿ ಅಂತಲೂ ಬೆಂಬಲಿತ ಶಾಸಕರಿಗೆ ಸೂಚನೆ ನೀಡಿದ್ದಾರೆ. ಇದರ ಅರ್ಧ ಸದ್ಯಕ್ಕೆ ಬ್ರೇಕ್ ಬಿದ್ದಿರುವ ದುಬೈ ಪ್ರವಾಸ ಫೆಬ್ರವರಿ ಮೊದಲ ವಾರದಲ್ಲಿ ಜರುಗುವ ಎಲ್ಲಾ ಸಾಧ್ಯತೆಯೂ ಇದೆ.
ಒಟ್ನಲ್ಲಿ, ಡಿಕೆಶಿ ಹಾಗೂ ಸತೀಶ್ ನಡುವಿನ ವಾರ್ ಈಗ ಮತ್ತೆ ತೀವ್ರಗೊಂಡಿದೆ… ಇದ್ರ ಮುಂದುವರಿದ ಭಾಗವಾಗಿಯೇ ದುಬೈ ಪ್ರವಾಸಕ್ಕೆ ಸದ್ದಿಲ್ಲದೇ ಸಿದ್ಧತೆ ನಡೆದಿದೆ. ಆದ್ರೆ, ಮುಂದೇನಾಗುತ್ತೋ ಕಾದು ನೋಡ್ಬೇಕು.