ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳ ದಂಡೇ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದು, ನಿನ್ನೆಯ ರೀತಿ ಇಂದು ಬೆಳಿಗ್ಗೆ ನೂಕುನುಗ್ಗಲು ಉಂಟಾಗಿದೆ. ಪಂದ್ಯದ ನಡುವೆಯೇ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ(Virat Kohli) ಕಾಲಿಗೆ ಬಿದ್ದಿದ್ದಾರೆ.

ದೆಹಲಿ ತಂಡವನ್ನು ಕೊಹ್ಲಿ ಪ್ರತಿನಿಧಿಸುತ್ತಿದ್ದು, ರೈಲ್ವೇಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಆಡುತ್ತಿದ್ದಾರೆ. ಇದಕ್ಕೂ ಮುನ್ನ ಸ್ಟೇಡಿಯಂನ ಹೊರಗೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ನೂಗುನುಗ್ಗಲು ಉಂಟಾಯಿತು. ಆರಂಭದಲ್ಲಿ, ಪ್ರವೇಶಕ್ಕಾಗಿ ಒಂದು ಗೇಟ್ ಮಾತ್ರ ತೆರೆದಿತ್ತು ಮತ್ತು ಜನರು ಕ್ರೀಡಾಂಗಣದೊಳಗೆ ಪ್ರವೇಶಿಸಲು ಪರಸ್ಪರ ತಳ್ಳಲು ಪ್ರಾರಂಭಿಸಿದರು. ಹೀಗಾಗಿ ಕೂಡಲೇ ಹೆಚ್ಚುವರಿ ಗೇಟ್ಗಳನ್ನು ತೆರೆಯಲಾಯಿತು. ಪರಿಸ್ಥಿತಿಯನ್ನು ಸುಗಮಗೊಳಿಸಲಾಯಿತು.
ಮೊದಲಿಗೆ, DDCA ಸುಮಾರು 6,000 ಆಸನ ಸಾಮರ್ಥ್ಯದ ಗೌತಮ್ ಗಂಭೀರ್ ಸ್ಟ್ಯಾಂಡ್ ಅನ್ನು ವೀಕ್ಷಕರಿಗೆ ತೆರೆಯಿತು. ಆದರೆ, ಪ್ರೇಕ್ಷಕರು ಹೆಚ್ಚಿದ್ದ ಕಾರಣ ಪರಿಸ್ಥಿತಿ ಕೈ ಮೀರಬಹುದೆಂದು ಗ್ರಹಿಸಿದ ಅಧಿಕಾರಿಗಳು ಸುಮಾರು 11,000 ಜನರಿಗೆ ಅವಕಾಶ ಕಲ್ಪಿಸುವ ಬಿಶನ್ ಸಿಂಗ್ ಬೇಡಿ ಸ್ಟ್ಯಾಂಡ್ ಅನ್ನು ತೆರೆದರು. ಅದು ಕೂಡ ಕೆಲವೇ ಕ್ಷಣಗಳಲ್ಲಿ ತುಂಬಿಹೋಯಿತು.