Site icon BosstvKannada

ಪದ್ಮಭೂಷಣ ಸ್ವೀಕರಿಸಿದ ನಟ Anantnag..!

Anantnag

ಕನ್ನಡದ ಎವರ್‌ಗ್ರೀನ್‌ ಹೀರೋ ಹಾಗೂ ಹಿರಿಯ ಖ್ಯಾತ ನಟ ಅನಂತ್‌ನಾಗ್‌ (Anantnag) ಅವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಭೂಷಣ (Padma Bhushan) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 76 ನೇ ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ನಟ ಅನಂತ್​ ನಾಗ್​ಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನ ಘೋಷಿಸಿತ್ತು. ಇಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಅನಂತ್​ ನಾಗ್​ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಅನಂತ್‌ನಾಗ್‌(Anantnag) ಎಂದರೆ ಕನ್ನಡದವರಿಗೆ ಕೇವಲ ನಟನಲ್ಲ, ಅವರೊಬ್ಬ ಸಿನೆಮಾ ವಿಶ್ವವಿದ್ಯಾಲಯ. ರಂಗಭೂಮಿ, ಕಿರುತೆರೆ, ಹಿರಿತೆರೆ ಹೀಗೆ ಎಲ್ಲ ಮಾಧ್ಯಮಗಳಲ್ಲೂ ತಮ್ಮ ವಿಶಿಷ್ಟ ಅಭಿನಯದಿಂದ ಛಾಪು ಮೂಡಿಸಿದವರು.
ಹಾಸ್ಯ, ಗಂಭೀರ, ಪ್ರಣಯ, ವಿಲನ್ ಹೀಗೆ ಯಾವುದೇ ಪಾತ್ರವಿರಲಿ, ಅದಕ್ಕೆ ಜೀವ ತುಂಬುವ ಅಸಾಮಾನ್ಯ ಸಾಮರ್ಥ್ಯ ಅವರದ್ದು. ‘ಮಳೆಬಿಲ್ಲು’, ‘ಗಾಳಿಮಾತು’, ‘ನೋಡಿ ಸ್ವಾಮಿ ನಾವಿರೋದೆ ಹೀಗೆ’, ‘ಹೊಸ ನೀರು’, ‘ಮಿಂಚಿನ ಓಟ’, ‘ಉದ್ಭವ’, ‘ಗಣೇಶನ ಮದುವೆ’, ‘ಮಾನಸ ಸರೋವರ’, ‘ಡಾ. ರಾಜ್‌ಕುಮಾರ್’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ – ಹೀಗೆ ಅವರ ಅಭಿನಯದ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಪ್ರತಿ ಚಿತ್ರದಲ್ಲೂ ಅವರು ತಮ್ಮದೇ ಆದ ಛಾಪು ಮೂಡಿಸಿ ದ್ದಾರೆ. ಅವರ ಮಾತು, ಮ್ಯಾನರಿಸಂ, ಕಣ್ಣುಗಳಲ್ಲೇ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಇವೆಲ್ಲಾ ಅಸಂಖ್ಯಾತ ಅಭಿಮಾನಿಗಳನ್ನು ಸೃಷ್ಟಿಸಿದೆ.

ಇಂತಹ ಅದ್ಭುತ ನಟನಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವುದು, ಅವರ ಕಲಾ ಸೇವೆಗೆ ಸಿಕ್ಕ ಸೂಕ್ತ ಗೌರವ ಎಂದು ಇಡೀ ಕನ್ನಡ ಚಿತ್ರರಂಗ, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕಲಾಸೇವೆಯಲ್ಲಿ ದಶಕಗಳ ಸೇವೆ ಸಲ್ಲಿಸಿದ್ದರೂ ಅವರಿಗೆ ಯಾವುದೇ ಪದ್ಮ ಪುರಸ್ಕಾರ ದೊರಕಿರಲಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಿಗಷ್ಟೇ ಅಲ್ಲದೆ ಅನೇಕ ಕನ್ನಡಿಗರನ್ನು ಕಾಡಿತ್ತು. ಈಗ ಅವರಿಗೆ ಪದ್ಮಭೂಷಣ ಸಿಗುವ ಮೂಲಕ ದಶಕಗಳ ಆ ಕೂಗಿಗೆ ಈಗ ಮುಕ್ತಿ ಸಿಕ್ಕಂತಾಗಿದ್ದು, ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ..

ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸಮಾರಂಭ
ರಾಷ್ಟ್ರಪತಿ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ದ್ರೌಪದಿ ಮುರ್ಮು ಅವರು ಅನಂತ್‌ನಾಗ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅನಂತ್‌ನಾಗ್‌ ಅವರ ಕುಟುಂಬಸ್ಥರು, ಕನ್ನಡ ಚಿತ್ರರಂಗದ ಕೆಲ ಗಣ್ಯರು ಹಾಗೂ ಇತರ ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.

Also Read: ತಮಿಳಿನಿಂದ ಕನ್ನಡ ಹುಟ್ಟಿದ್ದು : Kamal Haasan ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರಿಂದ ಆಕ್ರೋಶ

ಪದ್ಮಭೂಷಣ ಪ್ರಶಸ್ತಿಯು ಭಾರತ ರತ್ನ ಮತ್ತು ಪದ್ಮ ವಿಭೂಷಣದ ನಂತರ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಕಲೆ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ, ಸಮಾಜ ಸೇವೆ, ಸಾರ್ವಜನಿಕ ವ್ಯವಹಾರಗಳು, ಕ್ರೀಡೆ, ವ್ಯಾಪಾರ ಮತ್ತು ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಉನ್ನತ ಮಟ್ಟದ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅನಂತ್‌ನಾಗ್‌ ಅವರು ಕಲಾರಂಗಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

Exit mobile version