ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಫೆಂಗಲ್ ಚಂಡಮಾರುತ ತೀವ್ರತೆ ಪಡೆದಿದ್ದು, ಇಂದು ಉತ್ತರ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಗೆ ಅಪ್ಪಳಿಸಲಿದೆ. ಚಂಡಮಾರುತದಿಂದ ಈಗಾಗಲೇ ಗುಡುಗು ಸಹಿತ ಮಳೆ ಎದುರಿಸುತ್ತಿರುವ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ. ತೀವ್ರ ಚಂಡಮಾರುತವಾಗಿ ಗಂಟೆಗೆ 70ರಿಂದ 80 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಚಂಡಮಾರುತ ನೆಲೆಯಾಗುವ ಸಮಯದಲ್ಲಿ ಗಂಟೆಗೆ 90 ಕಿಮೀ ವೇಗದಲ್ಲಿ ಗಾಳಿ ಬೀಸಬಹುದು ಎಂದು ಹೇಳುತ್ತಾರೆ.
ಶಾಲಾ-ಕಾಲೇಜುಗಳಿಗೆ ರಜೆ; ರೆಡ್ ಅಲರ್ಟ್..!
ಅಲ್ಲದೇ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಭೂಕುಸಿತ ಉಂಟುಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ತಮಿಳುನಾಡು, ಪುದುಚೇರಿಯ ಜೊತೆಗೆ ಆಂಧ್ರದ ನೆಲ್ಲೂರು, ತಿರುಪತಿ, ಚಿತ್ತೂರು ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಿಸಿದೆ. ತಮಿಳುನಾಡು ರಾಜ್ಯ ಸರ್ಕಾರ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಿದೆ. ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ನಿಯಮ ಜಾರಿಗೊಳಿಸುವಂತೆ ಸೂಚಿಸಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾರವಣ
ಫೆಂಗಲ್ ಚಂಡಮಾರುತ ನೆರೆಯ ತಮಿಳು ನಾಡಿಗೆ ಅಪ್ಪಳಿಸಲು ಸಜ್ಜಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಕೆಲವು ಕಡೆ ತುಂತುರು ಮಳೆಯಾಗುವ ಲಕ್ಷಣ ಕಾಣುತ್ತಿದೆ.