
ದೇಶದ ಭದ್ರತೆಯಲ್ಲಿ ಗೇಮ್ ಚೇಂಜರ್ ಎನಿಸಲಿರುವ ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗದಲ್ಲಿ ಭಾರತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.. ದೇಶದ ಬತ್ತಳಿಕೆಗೆ ಇನ್ನೊಂದು ಹೊಸ ಅಸ್ತ್ರ ಸೇರ್ಪಡೆಯಾಗಿದೆ. ಅಣು ಬಾಂಬ್ ಹೊತ್ತೊಯ್ಯಬಲ್ಲ ಅಗ್ನಿ, ಬ್ರಹ್ಮೋಸ್ ಕ್ಷಿಪಣಿ ತಯಾರಿಸಿ ಯಶಸ್ವಿ ಪರೀಕ್ಷೆ ಮಾಡಿದ್ದ ಭಾರತ, ಈಗ ಇನ್ನೊಂದು ಹೊಸ ಕ್ಷಿಪಣಿ ಪ್ರಯೋಗ ಮಾಡಿ ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ. ಈ ಯಶಸ್ವಿ ಪ್ರಯೋಗದಿಂದ ಭಾರತದ ಶತ್ರು ದೇಶವಾದ ಚೀನಾ ಹಾಗೂ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ.
ದೇಸಿ ಯುದ್ಧ ಉಪಕರಣ ತಯಾರು ಮಾಡಲು ಹೆಚ್ಚಿನ ಮಹತ್ವ ನೀಡುತ್ತಿರುವ ಭಾರತ, ಇತ್ತೀಚೆಗೆ ಒಂದು ಹೆಜ್ಜೆ ಮುಂದೆ ಸಾಗಿ ಕ್ಷಿಪಣಿಗಳ ತಯಾರಿಕೆ ಮತ್ತು ಪ್ರಯೋಗ ಮಾಡುತ್ತಿರುವುದು, ದೇಶ ರಕ್ಷಣೆಯಲ್ಲಿ ಸಹಕಾರಿಯಾಗಲಿದೆ. ಭಾರತಿಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಶಬ್ದಕ್ಕಿಂತಲೂ ವೇಗವಾಗಿ ಚಲಿಸಬಲ್ಲ ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗದ ಮೂಲಕ ವಿಶ್ವದ ಸೂಪರ್ ಪವರ್ ದೇಶಗಳಾದ ಅಮೆರಿಕ, ರಷ್ಯಾ, ಚೀನಾ ದೇಶದ ಸಾಲಿಗೆ ಸೇರಿದೆ. ಈ ಪ್ರಯೋಗವು ಭಾರತದ ಸುಧರಿತ ಸೇನಾ ತಂತ್ರಜ್ಞಾನಕ್ಕೆ ನಿದರ್ಶನವಾಗಿದೆ.
ಹೈಪರ್ಸಾನಿಕ್ ಮಿಸೈಲ್ ಅಂದರೆ ಏನು? ಈ ಮಿಸೈಲ್ನ ವಿಶೇಷತೆ ಏನು?
ಶಬ್ದದ ವೇಗಕ್ಕಿಂತಲೂ 5 ಪಟ್ಟು ವೇಗವಾಗಿ ಮುನ್ನುಗ್ಗುವ ಕ್ಷಿಪಣಿಗೆ ಹೈಪರ್ಸಾನಿಕ್ ಎಂದು ಕರೆಯಲಾಗುತ್ತದೆ. ಇದನ್ನ ಮ್ಯಾಚ್ 5 ಎಂದು ಸಹ ಕರೆಯಲಾಗುತ್ತೆ. ಮ್ಯಾಚ್ 5 ಎಂದರೆ ಸಮುದ್ರ ಮಟ್ಟದಿಂದ ಪ್ರತಿಗಂಟೆಗೆ 1220km ವೇಗದಲ್ಲಿ ಚಲಿಸುವಷ್ಟು ಶಕ್ತಿ ಸಾಮರ್ಥ್ಯ ಹೊಂದಿರುತ್ತೆ. ಪ್ರತಿ ಸೆಕೆಂಡ್ಗೆ ಮೈಲು ದೂರ ಕ್ರಮಿಸುವಷ್ಟು ಶಕ್ತಿಶಾಲಿಯಾಗಿದೆ ಈ ಮಿಸೈಲ್. ಅಣುಬಾಂಬ್ ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಮಿಸೈಲ್ನ ವಿಶೇಷತೆಯಾಗಿದೆ. ದಾಳಿ ಮಾಡುವ ಸಂದರ್ಭದಲ್ಲಿ ತನ್ನ ದಿಕ್ಕನ್ನ ಬದಲಿಸಿ ದಾಳಿ ಮಾಡುವ ರೀತಿ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಶತ್ರುಗಳ ರಕ್ಷಣಾ ವ್ಯವಸ್ಥೆ ಕಣ್ಣಿಗೆ ಮಣ್ಣೆರಚಿ ಪೇಯ್ ಲೋಡನ್ನ 1500KM ಸಾಗಿಸುವ ರೀತಿ ವಿನ್ಯಾಸಗೊಳಿಸಲಾಗಿದೆ.
ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗವು ವಿಶ್ವದ ಉಳಿದ ದೇಶಗಳನ್ನು ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. DRDO ದೇಸಿಯವಾಗಿ ನಿರ್ಮಿಸಿದ ಈ ಕ್ಷಿಪಣಿ, 1500 km ದೂರದಲ್ಲಿರುವ ಶತ್ರು ಪಡೆಗಳನ್ನು ಧ್ವಂಸಗೊಳಿಸುವಷ್ಟು ಶಕ್ತಿಯುತವಾಗಿದೆ. ಈ ಹೈಪರ್ಸಾನಿಕ್ ಕ್ಷಿಪಣಿಯನ್ನು ಒಡಿಶಾದ ಅಬ್ದುಲ್ ಕಲಾಂ ದ್ವೀಪದಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಹೈಪರ್ಸಾನಿಕ್ ಮಿಸೈಲ್ ಪ್ರಯೋಗದಿಂದ ಭಾರತ ಹೊಸ ಮೈಲಿಗಲ್ಲಿನತ್ತ ದಾಪುಗಾಲಿಟ್ಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಪರೀಕ್ಷೆಯನ್ನ ಐತಿಹಾಸಿಕ ಕ್ಷಣ ಮತ್ತು ಅದ್ಭುತ ಸಾಧನೆ ಎಂದು ಬಣ್ಣಿಸಿದ್ದಾರೆ. ಇತ್ತಿಚಿನ ವರ್ಷಗಳಲ್ಲಿ ಭಾರತ, ತಂತ್ರಜ್ಞಾನಕ್ಕೆ ನೀಡುತ್ತಿರುವ ಪ್ರೋತ್ಸಾಹ ಈ ರೀತಿಯ ಹೊಸ ಹೊಸ ಆವಿಷ್ಕಾರಕ್ಕೆ ಕಾರಣವಾಗಿದೆ. ಮುಂದೊಂದು ದಿನ ಭಾರತ ಪಾಕಿಸ್ತಾನ ಅಥವಾ ಚೀನಾದ ನಡುವೆ ಯದ್ಧದ ವಾತಾವರಣ ಸೃಷ್ಠಿಯಾದಲ್ಲಿ ಈ ಮಿಸೈಲ್ ಭಾರತದ ಗೆಲುವಿನ ರೂವಾರಿಯಾಗಲಿದೆ.