ನವದೆಹಲಿ: ನಿಮ್ಮ ಹಣ ನಿಮ್ಮ ಹಕ್ಕು ಎನ್ನುವ ಅಭಿಯಾನ ನಡೆಯುತ್ತಿದ್ದು, ಹಕ್ಕುದಾರರಿಗೆ ಅವರ ಹಣ ಮರಳಿಸಲು ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ.
ದೇಶದಲ್ಲಿನ ಬ್ಯಾಂಕ್ ಗಳು, ಇನ್ಷೂರೆನ್ಸ್ ಕಂಪನಿಗಳು, ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಜನರ ಹಣ ಹಲವಾರು ಕಾರಣಗಳಿಂದ ಕ್ಲೇಮ್ ಆಗದೇ (Unlcaimed Money) ಹಾಗೆ ಇದ್ದು, ಅದನ್ನು ಮತ್ತೆ ಮರಳಿಸುವುದಕ್ಕಾಗಿ ಸರ್ಕಾರವು ನಿಮ್ಮ ಹಣ ನಿಮ್ಮ ಹಕ್ಕು (Your Money, Your Right) ಎಂಬ ಅಭಿಯಾನವನ್ನು ಆರಂಭಿಸಿದೆ. ಈ ರೀತಿ ಇರುವ ಹಣ ಲಕ್ಷ ಕೋಟಿ ಮೀರಿದೆ. ಎನ್ನಲಾಗಿದೆ. ಹೀಗಾಗಿ ಈ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಭಾಗಿಯಾಗಿದ್ದು, ನಿಮ್ಮ ಹಣವನ್ನು ಮರಳಿ ಪಡೆಯಿರಿ ಎಂದು ಸಂದೇಶ ಸಾರಿದ್ದಾರೆ. ಈ ಕುರಿತು ಪೋಸ್ಟ್ ಕೂಡ ಮಾಡಿದ್ದಾರೆ. ಮರೆತು ಉಳಿದಿರುವ ಹಣಕಾಸು ಆಸ್ತಿಯನ್ನು ಹೊಸ ಅವಕಾಶವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.
ಈ ರೀತಿ ಬ್ಯಾಂಕ್ ಗಳಲ್ಲಿ 78,000 ಕೋಟಿ ರೂ. ನಷ್ಟು ಹಣ ಕ್ಲೇಮ್ ಆಗದೆ ಉಳಿದಿದೆ. ಇನ್ಷೂರೆನ್ಸ್ ಕಂಪನಿಗಳಲ್ಲಿ 14,000 ಕೋಟಿ ರೂ, ಮ್ಯೂಚುವಲ್ ಫಂಡ್ಗಳಲ್ಲಿ 3,000 ಕೋಟಿ ರೂ ಹಣ ಇನ್ನೂ ಕ್ಲೇಮ್ ಆಗಿಲ್ಲ. ಷೇರುಗಳ ಡಿವಿಡೆಂಡ್ 9,000 ಕೋಟಿ ರೂ. ಕ್ಲೇಮ್ ಆಗದೆ ಉಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಖಾತೆದಾರರು ಸಾವನ್ನಪ್ಪಿದ್ದು, ಹಾಗೆಯೇ ಮರೆತುಬಿಟ್ಟಿರುವುದು, ನಾಮಿನಿಗಳಿಲ್ಲದೇ ಇರುವುದು ಸೇರಿದಂತೆ ಇನ್ನಿತರ ಕಾರಣಗಳಿಗೆ ಹಣವು ಕ್ಲೇಮ್ ಆಗದೆ ಉಳಿದಿರುತ್ತದೆ. ಹೀಗಾಗಿ ಇಂತಹ ಹಣಕ್ಕೆ ಕ್ಲೇಮ್ ಸಲ್ಲಿಸಲು ಸರ್ಕಾರ ಅವಕಾಶ ಕೋರಿದೆ.
ಬ್ಯಾಂಕ್ ಹಣ ಕ್ಲೇಮ್ ಮಾಡಲು ಆರ್ಬಿಐನ UDGAM ಪೋರ್ಟಲ್: udgam.rbi.org.in/unclaimed-deposits/ ಭೇಟಿ ನೀಡಬಹುದು. ಇನ್ಷೂರೆನ್ಸ್ ಪಾಲಿಸಿ ಹಣ ಪಡೆಯಲು: bimabharosa.irdai.gov.in/ ವೆಬ್ ಗೆ ಭೇಟಿ ನೀಡಬಹುದು. ಮ್ಯೂಚುವಲ್ ಫಂಡ್ ಹಣಕ್ಕೆ ಸೆಬಿಯಿಂದ MITRA ಪೋರ್ಟಲ್ app.mfcentral.com/ ಗೆ ಭೇಟಿ ನೀಡಬಹುದು. ಷೇರು ಮತ್ತು ಡಿವಿಡೆಂಡ್ಗಳಿಗೆ ಐಇಪಿಎಫ್ಎ ಪೋರ್ಟಲ್ ಇದೆ: www.iepf.gov.in/ ಗೆ ಭೇಟಿ ನೀಡಬಹುದು.

