ಇತ್ತೀಚೆಗಷ್ಟೇ ವಿಶ್ವಕಪ್ ಗೆ ಮುತ್ತಿಕ್ಕಿದ ಭಾರತೀಯ ಮಹಿಳಾ ತಂಡ ಮತ್ತೊಂದು ಸರಣಿಗೆ ಸಜ್ಜಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ವಿಶ್ವ ಚಾಂಪಿಯನ್ ಮಹಿಳಾ ತಂಡ ಈ ಮೂಲಕ ಮೈದಾನಕ್ಕೆ ಇಳಿಯಲು ಮುಂದಾಗಿದೆ. ಭಾರತೀಯ ಕ್ರಿಕೆಟ್ ತಂಡ (Indian women’s cricket team) ಡಿಸೆಂಬರ್ 21ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದೆ. ಈ ಹಿನ್ನೆಲೆಯಲ್ಲಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ನೇತೃತ್ವದ 15 ಆಟಗಾರ್ತಿಯರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿ ಪ್ರಕಟಿಸಿದೆ. ಉಪನಾಯಕಿ ಸ್ಮೃತಿ ಮಂಧಾನ ಕೂಡ ಈ ತಂಡದಲ್ಲಿದ್ದಾರೆ.
ಭಾರತೀಯ ಕ್ರಿಕೆಟ್ ತಂಡವು ನ. 2ರಂದು ನಡೆದ ವಿಶ್ವಕಪ್ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲಿಸಿ ಕಪ್ ಗೆ ಮುತ್ತಿಕ್ಕಿತ್ತು. ಇದು ವಿಶ್ವಕಪ್ ನಂತರ ಟೀಂ ಇಂಡಿಯಾದ ಮೊದಲ ಸರಣಿಯಾಗಿದೆ. ವಿಶ್ವಕಪ್ ವಿಜೇತ ತಂಡದಲ್ಲಿದ್ದ ಬಹುತೇಕ ಆಟಗಾರ್ತಿಯರು ಈ ತಂಡದಲ್ಲಿದ್ದಾರೆ. ಮಂಧಾನ ಇದೇ ನ. 23 ರಂದು ಪಲಾಶ್ ಮುಚ್ಚಲ್ ಜೊತೆ ವಿವಾಹಕ್ಕೆ ಮುಂದಾಗಿದ್ದರು. ಆದರೆ, ನಾನಾ ಕಾರಣಗಳಿಂದಾಗಿ ಅದು ರದ್ದಾಗಿತ್ತು. ಹೀಗಾಗಿ ಅವರು ಈ ಸರಣಿಯಿಂದ ಹಿಂದೆ ಸರಿಯಬಹುದು ಎಂದು ಭಾವಿಸಲಾಗಿತ್ತು. ಯಾವುದಕ್ಕೂ ಅಂಜದ ಸ್ಮೃತಿ ಮಾತ್ರ ತಮ್ಮ ವೃತ್ತಿ ಜೀವನದತ್ತ ಹೆಜ್ಜೆ ಹಾಕಿದ್ದಾರೆ. ಇದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಟಿ20 ಸರಣಿಗೆ ತಂಡದಲ್ಲಿ ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಸ್ನೇಹ ರಾಣಾ, ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ಹರ್ಲೀನ್ ಡಿಯೋಲ್, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ರೇಣುಕಾ ಸಿಂಗ್, ರಿಚಾ ಘೋಷ್, ಜಿ ಕಮಲಿನಿ, ಶ್ರೀಚರಣಿ, ವೈಷ್ಣವಿ ಶರ್ಮಾ ಸ್ಥಾನ ಪಡೆದಿದ್ದಾರೆ.

