Site icon BosstvKannada

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಗೃಹಲಕ್ಷ್ಮಿ ಯೋಜನೆ!

ಬೆಂಗಳೂರು, ಫೆ.17: ಮಹಿಳೆಯರ ಸ್ವಾವಲಂಬಿತನ, ಸ್ವತಂತ್ರವಾಗಿ ಜೀವನಕ್ಕೆ ಸಹಕಾರಿ ಆಗಲೆಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ್ದು, ಅದು ಈಗ ಜನರ ಮೆಚ್ಚುಗೆ ಗಳಿಸಿದೆ. ಹೌದು.. ಗೃಹಲಕ್ಷ್ಮೀ ಸ್ಕೀಂನಡಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಖಾತೆಗೆ 2,000 ರೂಪಾಯಿ ಹಣ ಹಾಕಲಾಗುತ್ತದೆ. ಇದು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೊಳಿಸಲಾದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿದ್ದು, ನೇರ ನಗದು ವರ್ಗಾವಣೆ ಮೂಲಕ ಹಣವು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ರಾಜ್ಯದ 1 ಕೋಟಿ 24 ಲಕ್ಷದ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ನೇರವಾಗಿ ಅವರ ಖಾತೆಗೆ ಜಮೆ ಆಗುತ್ತಿದೆ. ಮಕ್ಕಳ ಶಿಕ್ಷಣ ಮತ್ತು ತುರ್ತು ವೈದ್ಯಕೀಯ ವೆಚ್ಚಕ್ಕೆ ಇದು ಸಹಕಾರಿಯಾಗುತ್ತಿದೆ. ಗೃಹಿಣಿಯರ ಕೈಗೆ ಸಿಕ್ಕ ನಿಜವಾದ ಆರ್ಥಿಕ ಸಹಾಯವಾಗಿದೆ. ಇದರಿಂದ ಬಡತನ ರೇಖೆಗಿಂತ ಕೆಳಗಿರುವ(BPL), ಮೇಲಿರುವ (APL) ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳ ಮುಖ್ಯಸ್ಥೆಯರ ಆರ್ಥಿಕ ಸ್ವಾವಲಂಬನೆ ಸಾಧಿಸುವುದೇ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮುಖ್ಯ ಧ್ಯೇಯವಾಗಿದೆ.

1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ : 59,863 ಕೋಟಿ ಖರ್ಚು

ರಾಜ್ಯದ 1 ಕೋಟಿ 24 ಲಕ್ಷದ ಮಹಿಳೆಯರ ಖಾತೆಗೆ ಹಣ ನೀಡಲಾಗುತ್ತಿದ್ದು, ಇಲ್ಲಿವರೆಗೂ 59 ಸಾವಿರದ 863 ಕೋಟಿ ರೂಪಾಯಿ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವ್ಯಯಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮೀ ಹಣವು, ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದೆ. ಕುಟುಂಬ ಸದಸ್ಯರ ಅನಾರೋಗ್ಯ ಸಂದರ್ಭದಲ್ಲಿ ಆಪತ್ಬಾಂಧವನಂತೆ ಸಹಕಾರಿಯಾಗುತ್ತಿದೆ. ಅದೆಷ್ಟೋ ಜನರು ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು, ಟಿವಿ, ಫ್ರಿಡ್ಜ್‌, ಬೋರ್‌ವೆಲ್‌ ಹಾಕಿಸಿದ್ದು ಅನೇಕ ಸಂದರ್ಭಗಳಲ್ಲಿ ಸುದ್ದಿಯಾಗಿದೆ. ಅಲ್ಲದೇ, ಹೆಣ್ಣು ಮಕ್ಕಳಿಗೆ ಕಿವಿ ಓಲೆ ಸೇರಿದಂತೆ ಒಡವೆಗಳನ್ನು ಕೊಡಿಸಿದ್ದು, ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಅದೇ ಹಣದಲ್ಲಿ ಅಂಗಡಿ ಇಟ್ಟುಕೊಂಡಿರೋದು ವರದಿಯಾಗಿದೆ. ಇದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಾರಥ್ಯದ ಸರ್ಕಾರದ ನಿರ್ಧಾರ ಸಾರ್ಥಕಥೆಗೆ ಸಾಕ್ಷಿಯಾಗಿದೆ.

Exit mobile version