BosstvKannada

ಮಹಿಳಾ ದಿನಾಚರಣೆ: ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ನಗರದ ಮಹಿಳೆಯರು

ಬೆಂಗಳೂರು, ಮಾ.11: ನಗರದ ಶ್ರೀಚಂದ್ರ ಹ್ಯಾಪಿ ವುಮೆನ್ಸ್ ಕ್ಲಬ್ ವತಿಯಿಂದ ಅನ್ಷುಲಾ ಮತ್ತು ಸುದಯ ಫೌಂಡೇಶನ್ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ “ವುಮೆನ್ ಫಿಯೆಸ್ಟಾ” (Women Fiesta) ಕಾರ್ಯಕ್ರಮದಲ್ಲಿ ಮಹಿಳೆಯರು ತಮ್ಮ ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕುವ ಮೂಲಕ ವಿಶೇಷವಾಗಿ ಮಹಿಳಾ ದಿನಾಚರಣೆಯನ್ನು ಸಂಭ್ರಮಿಸಿದರು.

ಅನ್ಷುಲಾ ಮತ್ತು ಶ್ರೀಚಂದ್ರ ಹ್ಯಾಪಿ ವುಮೆನ್ಸ್ ಕ್ಲಬ್‌ನ ಅಧ್ಯಕ್ಷರಾದ ಶ್ರೀಮತಿ ಅಂಶು ಹೆಗಡೆ ಅವರು ಕಾರ್ಯಕ್ರಮದ ಕುರಿತು ಮಾತನಾಡಿ, “ಮಹಿಳೆಯರಲ್ಲಿ ಅಡಗಿರುವ ಕೌಶಲ್ಯವನ್ನು ಹೊರತರಲು ಮತ್ತು ಅವರ ಬಾಲ್ಯದ ಸುಂದರ ಕ್ಷಣಗಳನ್ನು ಮತ್ತೆ ಮೆಲುಕು ಹಾಕಲು ಈ ವೇದಿಕೆ ಕಲ್ಪಿಸಲಾಗಿದೆ. ಸಂಭ್ರಮದ ಜೊತೆಗೆ ಭಾರತದಾದ್ಯಂತ ಇರುವ ಧ್ಯಾನ ಕೇಂದ್ರಗಳಿಗೆ ದೇಣಿಗೆ ನೀಡುವ ಮೂಲಕ ಸಾಮಾಜಿಕ ಕಾರ್ಯಕ್ಕೂ ನಾವು ಕೈಜೋಡಿಸುತ್ತಿದ್ದೇವೆ,” ಎಂದು ತಿಳಿಸಿದರು.

ಕ್ಲಬ್ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಸಿ.ಪಿ. ಮಾತನಾಡಿ, ಮಹಿಳೆಯರು ಒತ್ತಡದಿಂದ ಮುಕ್ತರಾಗಿ ಜನರೊಂದಿಗೆ ಬೆರೆಯಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಕಾರ್ಯಕ್ರಮದ ಜೊತೆಗೆ ಅಡುಗೆ ಸ್ಪರ್ಧೆ ಮತ್ತು ಬಿಂದಾಸ್ ವಾಕ್‌ನಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಕೂಡ ವಿತರಿಸಲಾಯಿತು ಎಂದು ಅವರು ಹೇಳಿದರು.

ಈ ವೇಳೆ 200ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು, ಎಲ್ಲರೂ ಪಿಂಕ್‌ ಉಡುಪು ಧರಿಸಿ ಕಂಗೊಳಿಸುತ್ತಿದ್ದರು. ನೆರೆದಿದ್ದ ಎಲ್ಲಾ ಮಹಿಳೆಯರಿಗೆ ಒನ್ ಮಿನಿಟ್ ಗೇಮ್ಸ್, ಬಣ್ಣ ಹಚ್ಚುವ ಸ್ಪರ್ಧೆ, ಅಡುಗೆ ಸ್ಪರ್ಧೆ, ಜುಂಬಾ ಸೆಷನ್ ಮತ್ತು ‘ಬಿಂದಾಸ್ ವುಮೆನ್ ವಾಕ್ ನಂತಹ ಆಕರ್ಷಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಈ ಸಮಾರಂಭದಲ್ಲಿ ಮೀಡಿಯಾ ಕನೆಕ್ಟ್‌ ಹಾಗೂ ಸುದಯ ಫೌಂಡೇಶನ್ ಸಂಸ್ಥಾಪಕಿ ಮತ್ತು ಸಿಇಒ ದಿವ್ಯಾ ರಂಗೇನಹಳ್ಳಿ, ಮಾಜಿ ಬಿಬಿಎಂಪಿ ಸದಸ್ಯೆ ಯಶೋದ ಲಕ್ಷ್ಮಿ ಕಾಂತ, ಸಾಮಾಜಿಕ ಕಾರ್ಯಕರ್ತರಾದ ಜ್ಯೋತಿ ಪ್ರಸಾದ್, ಸ್ಮಿತಾ ಶ್ರವಣ್, ವಿಜಯಶ್ರೀ, ಶರಣ್ಯ ಮತ್ತು ಪ್ರಮೀಳಾ ಅಶೋಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Exit mobile version