ನವದೆಹಲಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮುಂಬರುವ ಬಜೆಟ್ (Union Budget) ನಲ್ಲೇ ಈ ಸಿಹಿ ಸುದ್ದಿ ಹೊರ ಬೀಳುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ಪ್ರತಿ ಬಾರಿಯೂ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಮಹತ್ವ ನೀಡುತ್ತಲೇ ಬರುತ್ತಿದೆ. ಈ ಬಾರಿಯೂ ರೈತರು ಖುಷಿಯಾಗುವಂತಹ ಸುದ್ದಿ ಹೊರ ಬೀಳುವ ಸಾಧ್ಯತೆ ಇದೆ. 2013-14ರಲ್ಲಿ ಕೃಷಿ ಕ್ಷೇತ್ರಕ್ಕೆ 21,933 ಕೋಟಿ ರೂ ನೀಡಲಾಗಿತ್ತು.
2025-26ರ ಬಜೆಟ್ನಲ್ಲಿ 1.27 ಲಕ್ಷ ಕೋಟಿ ರೂಗಿಂತ ಹೆಚ್ಚಿನ ಮೊತ್ತವನ್ನು ಕೃಷಿಗೆ ವಿನಿಯೋಗಿಸಲಾಗಿದೆ. 2026-27ರ ಬಜೆಟ್ನಲ್ಲಿ ಇದು 1.50 ಲಕ್ಷ ಕೋಟಿ ರೂ. ತಲುಪುವ ಸಾಧ್ಯತೆ ಇದೆ. ಕೇಂದ್ರವು ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ 6 ಸಾವಿರ ರೂ. ಹಣವನ್ನು ರೈತರಿಗೆ ನೀಡುತ್ತಿತ್ತು. ಇದಕ್ಕಾಗಿ ಪ್ರತಿ ಕಂತಿಗೆ ಸರ್ಕಾರವು ಸುಮಾರು 20 ಸಾವಿರ ಕೋಟಿ ರೂ. ವಿನಿಯೋಗಿಸುತ್ತಿತ್ತು. ಆದರೆ, ಈ ಬಾರಿ ಪಿಎಂ ಕಿಸಾನ್ ಯೋಜನೆಯ ಕಂತಿನ ಹಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ.
ಈ ಬಾರಿ ಬಜೆಟ್ ನಲ್ಲಿ ಪಿಎಂ ಕಿಸಾನ್, ಫಸಲ್ ಬಿಮಾ ಯೋಜನೆ, ಕೃಷಿ ಸಂಚಯಿ ಯೋಜನೆ ಇತ್ಯಾದಿ ಸ್ಕೀಮ್ಗಳಿಗೆ ಹೆಚ್ಚಿನ ಹಣ ಮೀಸಲಿಡುವ ಸಾಧ್ಯತೆ ಇದೆ. 2019ರಿಂದ ಈ ಯೋಜನೆ ಜಾರಿಗೆ ಬಂದಿದೆ. ಇಲ್ಲಿಯವರೆಗೂ 21 ಪಿಎಂ ಕಿಸಾನ್ ಯೋಜನೆ ಜಾರಿಗೊಳಿಸಲಾಗಿದೆ. 22ನೇ ಕಂತಿನ ಹಣ ಈ ತಿಂಗಳೇ ಸಿಗಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರ ಅಂದುಕೊಂಡಂತೆ ಪಿಎಂ ಕಿಸಾನ್ ಹಣವನ್ನು ದ್ವಿಗುಣಗೊಳಿಸಿದರೆ ರೈತರ ಖುಷಿ ಕೂಡ ಡಬಲ್ ಆಗಲಿದೆ.

