ಹುಬ್ಬಳ್ಳಿ: ಚಂದನವನದ ಪೈಲ್ವಾನ್ ಹುಬ್ಬಳ್ಳಿ ನೆಲದಲ್ಲಿ ನಿಂತು ತಮ್ಮ ವಿರೋಧಿಗಳ ವಿರುದ್ಧ ತೊಡೆ ತಟ್ಟಿದ್ದಾರೆ. ಮಾರ್ಕ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ತಮ್ಮ ಅಭಿಮಾನಿಗಳಿಗೆ ದೊಡ್ಡ ಸಂದೇಶ ಸಾರಿದ್ದಾರೆ.
ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಡಿ.25ರಂದು ಬಿಡುಗಡೆ ಆಗುತ್ತಿದೆ. ಹೀಗಾಗಿ ಪ್ರಚಾರ ಕಾರ್ಯ ನಡೆಯುತ್ತಿದೆ. ಪ್ರಚಾರದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಸುದೀಪ್, ಸಿನಿಮಾ ಬಿಡುಗಡೆ ಮಾಡುವುದರ ಜೊತೆಗೆ ಯುದ್ಧ ಮಾಡಬೇಕಿದೆ. ಹೊರಗೆ ಪಡೆ ಒಂದು ಯುದ್ಧಕ್ಕೆ ರೆಡಿ ಆಗುತ್ತಿದೆ. ನಾನು ಮಾತನಾಡಬಾರದು ಎಂದು ಸುಮ್ಮನಿದ್ದೆ, ಆದರೆ ಕೆರಳಿಸಿದರೆ ಸುಮ್ಮನಿರಲ್ಲ. ಇಲ್ಲಿಯವರೆಗೂ ಮೌನದಿಂದ ಇರಬೇಕೆಂದುಕೊಂಡಿದ್ದೆ. ಅವರು ಸುಮ್ಮನಿದ್ದರೆ ಸರಿ, ಇಲ್ಲವಾದರೆ ಅವರ ಭಾಷೆಯಲ್ಲೇ ಅವರಿಗೆ ಉತ್ತರ ನೀಡಿ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ. ಹೀಗೆ ಸುದೀಪ್ ಹೇಳಿದ್ದಾದರೂ ಯಾರಿಗೆ? ಯಾಕೆ ಈ ರೀತಿ ಹೇಳಿದ್ದಾರೆ ಎಂಬೆಲ್ಲ ಚರ್ಚೆಗಳು ಈಗ ಆರಂಭವಾಗಿವೆ.
‘ಮಾರ್ಕ್’ ಸಿನಿಮಾದ ಪ್ರಚಾರ ಆರಂಭವಾದಾಗಿನಿಂದಲೂ ದರ್ಶನ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸುತ್ತಿದ್ದರು. ‘ಮಾರ್ಕ್’ ಸಿನಿಮಾ ನಿರ್ದೇಶಕ ವಿಜಯ್ ಕಾರ್ತಿಕೇಯ, ‘ಕಾವೇರಿ ತಮಿಳಿಗೆ ಸೇರಬೇಕು’ ಎಂದು ಹೇಳಿದ್ದಾರೆಂದು ನಕಲಿ ಪೋಸ್ಟ್ ತಯಾರಿಸಿ ಹಂಚಿಕೊಂಡು ಸುಳ್ಳು ಸುದ್ದಿ ಹಬ್ಬುವ ಯತ್ನ ಮಾಡಿದ್ದರು. ‘ಡೆವಿಲ್’ ಸಿನಿಮಾದ ಒಂಬತ್ತು ಸಾವಿರ ಪೈರಸಿ ಲಿಂಕ್ ಗಳನ್ನು ತೆಗೆದು ಹಾಕಿದ್ದೇವೆ. ಈಗ ನಿಮಗೂ ನಾವು ಇದೇ ರೀತಿ ಮಾಡಲಿದ್ದೇವೆ ಎನ್ನುವ ಮೂಲಕ ಪೈರಸಿ ಮಾಡುವ ಬೆದರಿಕೆ ಹಾಕಿದ್ದರು. ಬುಕ್ಮೈ ಶೋನಲ್ಲಿ ಸಹ ರೇಟಿಂಗ್ ಕಡಿಮೆ ಮಾಡುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಹೀಗಾಗಿಯೇ ಹುಬ್ಬಳ್ಳಿಯಲ್ಲಿ ಸುದೀಪ್ ಪರೋಕ್ಷವಾಗಿ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈಗ ಸುದೀಪ್ ಅವರ ಮಾತುಗಳಿಗೆ ದರ್ಶನ್ ಅಭಿಮಾನಿಗಳು ನೆಗೆಟಿವ್ ಮಾತನಾಡುತ್ತಿದ್ದಾರೆ. ನೆಗೆಟಿವ್ ಆಗಿ ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೇ, ‘ಮಾರ್ಕ್’ ಸಿನಿಮಾಕ್ಕೆ ಹಾನಿ ಮಾಡಿಯೇ ಮಾಡುತ್ತೇವೆಂದು ಕೆಲವು ಕಿಡಿಗೇಡಿಗಳು ಪೋಸ್ಟ್ ಮಾಡುತ್ತಿದ್ದಾರೆ. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇದೇ ತಿಂಗಳು 11 ರಂದು ಬಿಡುಗಡೆ ಆಗಿತ್ತು. ಮೊದಲ ದಿನ ಉತ್ತಮ ಗಳಿಕೆ ಮಾಡಿದ ‘ಡೆವಿಲ್’, ನಂತರ ಗಳಇಕೆಯಲ್ಲಿ ತುಂಬಾ ಹಿಂದೆ ಉಳಿಯಿತು. ಡಿ.25ರಂದು ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆಯಾಗಲಿದ್ದು, ಮುಂದೆ ಏನಾಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

