ಬೆಂಗಳೂರು, ಮಾ.05: ಬಿಹಾರ ರಾಜ್ಯ ರಾಜಕೀಯ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಆಗಿರುವ ನಿತೀಶ್‌ಕುಮಾರ್ ದಿಢೀರ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಅನ್ನೋ ಸುದ್ದಿ ಬಲವಾಗಿ ಹರಿದಾಡುತ್ತಿದೆ. ಜೆಡಿಯು ನಾಯಕರಾಗಿರುವ ನಿತೀಶ್ ಕುಮಾರ್ 10ನೇ ಬಾರಿಗೆ ಸಿಎಂ ಆಗಿ 6 ತಿಂಗಳು ಕಳೆಯುವ ಮುನ್ನವೇ ಪದತ್ಯಾಗ ಮಾಡುವ ಸಾಧ್ಯತೆ ಇದೆ. ಅದರ ಹಿಂದೆ ಎನ್‌ಡಿಎ ಮೈತ್ರಿಕೂಟದ ಅತಿದೊಡ್ಡ ಸ್ಟ್ರಾಟಜಿ ಇದೆ ಅಂತಾ ಹೇಳಲಾಗ್ತಿದೆ. ಹಾಗಾದ್ರೆ, ಏನದು ಸ್ಟ್ರಾಟಜಿ? ನಿತೀಶ್ ರಾಜೀನಾಮೆಗೆ ಒಪ್ಪುತ್ತಿರೋದೇಕೆ ಅನ್ನೋದನ್ನ ನೋಡೋಣ ಬನ್ನಿ.

ಅಷ್ಟಕ್ಕೂ ನಿತೀಶ್‌ಕುಮಾರ್ ರಾಜೀನಾಮೆ ಹಿಂದೆ ಒಂದು ಮಾಸ್ಟರ್ ಪ್ಲ್ಯಾನ್ ಇದೆ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ರಾಜ್ಯಸಭೆಗೆ ಕಳಿಸಲು ಬಿಜೆಪಿ ತಂತ್ರ ರೂಪಿಸಿದೆ. ಇದರ ನಂತರ, ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳಲಿದೆ. ನಿತೀಶ್‌ಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡುವ ಜೊತೆಗೆ, ಅವರ ಪುತ್ರ ನಿಶಾಂತ್ ಕುಮಾರ್‌ರನ್ನು ಉಪಮುಖ್ಯಮಂತ್ರಿ ಮಾಡುವ ಪ್ರಸ್ತಾವನೆಯನ್ನು ಮಿತ್ರಪಕ್ಷ ಬಿಜೆಪಿ ಮಂಡಿಸಿದೆ ಎನ್ನಲಾಗಿದೆ. ಈ ಒಪ್ಪಂದ ಚುನಾವಣೆ ಹೊತ್ತಿನಲ್ಲೇ ನಡೆದಿದೆ ಅಂತಾ ಹೇಳಲಾಗ್ತಿದ್ದು, ಅದಕ್ಕೆ ನಿತೀಶ್‌ಕುಮಾರ್ ಕೂಡ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗುತ್ತಿದೆ.
ಇನ್ನು, ಕುಟುಂಬ ರಾಜಕಾರಣದ ವಿರೋಧಿಯಾಗಿದ್ದ ನಿತೀಶ್ ಕುಮಾರ್ ಈಗ ಅದೇ ಕುಟುಂಬ ರಾಜಕಾರಣ ಪೋಷಿಸಲು ಮುಂದಾಗಿದ್ದಾರೆ. ನಿತೀಶ್ ಕುಮಾರ್, ತಮ್ಮ ಏಕೈಕ ಪುತ್ರ ನಿಶಾಂತ್ ಕುಮಾರ್‌ರನ್ನು ರಾಜಕೀಯಕ್ಕೆ ತರಲು ಸಮ್ಮತಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಒಂದೊಮ್ಮೆ ನಿತೀಶ್ ರಾಜ್ಯಸಭೆಗೆ ಹೋಗಿದ್ದೇ ಆದರೆ ಬಿಹಾರ ಉಪಮುಖ್ಯಮಂತ್ರಿ ಪಟ್ಟ ನಿಶಾಂತ್‌ಗೆ ಸಿಗೋದು ಫಿಕ್ಸ್ ಅಂತಲೂ ವಿಶ್ಲೇಷಣೆ ಮಾಡಲಾಗುತ್ತಿದೆ. ಆದ್ರೆ ಅಂತಿಮವಾಗಿ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.