ಕನ್ನಡದ ಖ್ಯಾತ ನಟ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವುಗೊಳಿಸಿದ್ದು, ಇದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ಹೋರಹಾಕಿದ್ದಾರೆ. ನಗರದ ಕೆಂಗೇರಿ ರಿಂಗ್ ರೋಡ್ ನಲ್ಲಿರುವ ಸಾಹಸ ಸಿಂಹ, ನಟ ಡಾ. ವಿಷ್ಣುವರ್ಧನ್ ಸಮಾಧಿಯನ್ನ ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ನಗರದ ಕೆಂಗೇರಿ ಬಳಿಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ಸಮಾಧಿ ತೆರವು ಮಾಡಿರುವುದರಿಂದ ಆಘಾತಕ್ಕೆ ಒಳಗಾಗಿರುವ ವಿಷ್ಣು ಅಭಿಮಾನಿಗಳು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

35 ವರ್ಷಗಳ ಕಲಾಸೇವೆ ಮತ್ತು 200 ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನಡೆಸಲಾಗಿತ್ತು. ನಂತರದಲ್ಲಿ ವಿಷ್ಣು ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕವಾಗಿ ಘೋಷಿಸಬೇಕೆಂಬ ಹೋರಾಟ ನಡೆಯುತ್ತಲೇ ಇತ್ತು. ಆದರೆ ಹೈಕೋರ್ಟ್ ಸೂಚನೆ ಮೇರೆ ರಾತ್ರೋರಾತ್ರಿ ಸಮಾಧಿಯನ್ನ ತೆರವುಗೊಳಿಸಲಾಗಿದೆ.

ಹೈಕೋರ್ಟ್ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿ ತೆರವುಗೊಳಿಸಲಾಗಿದ್ದು, ಇದೀಗ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿಮಾನ್ ಸ್ಟುಡಿಯೋ ಬಳಿ ಅಭಿಮಾನಿಗಳು ಜಮಾವಣೆಗೊಂಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕೆಂಗೇರಿ ಠಾಣಾ ಪೊಲೀಸರಿಂದ ಬಿಗಿ ಭದ್ರತೆ ವಹಿಸಲಾಗಿದೆ. ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾದ ಹಿನ್ನೆಲೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿ ತೆರವುಗೊಳಿಸಲಾಗಿದೆ. ಮೈಸೂರಿನಲ್ಲಿ ಒಟ್ಟು 2.75 ಎಕರೆ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾಗಿದೆ.

ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿರುವ ನಿರ್ದೇಶಕ ರವಿ ಶ್ರೀವತ್ಸ. ಜಾಗದ ವಿಚಾರವಾಗಿ ವಾಗ್ವಾದ ನಡೆಯುತ್ತಿತ್ತು. ಬಾಲಣ್ಣ ಕುಟುಂಬ ಹಾಗೂ ವಿಷ್ಣುವರ್ಧನ್ ಅವರ ಫ್ಯಾನ್ಸ್ ನಡುವೆ ವಾಗ್ವಾದ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಪುಣ್ಯಸ್ಮರಣೆಗೂ ಅವಕಾಶ ನೀಡಿರಲಿಲ್ಲ. ಇದೀಗ ರಾತ್ರೋರಾತ್ರಿ ಸಮಾಧಿ ನೆಲಸಮ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Share.
Leave A Reply