Site icon BosstvKannada

ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ವಿನೇಶ್ ಫೋಗಟ್

ನವದೆಹಲಿ: ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ (Paris Olympics) 150 ಗ್ರಾಂ ಹೆಚ್ಚುವರಿ ತೂಕದಿಂದಾಗಿ ಪದಕದಿಂದ ವಂಚಿತರಾಗಿ ಬೇಸರದಲ್ಲಿ ವೃತ್ತಿ ಜೀವನಕ್ಕೆ ವಿನೇಶ್ ಫೋಗಟ್ ನಿವೃತ್ತಿ ಹೇಳಿದ್ದರು. ಈಗ ಮತ್ತೆ ನಿವೃತ್ತಿ ಹಿಂಪಡೆದು ಮತ್ತೆ ಅಖಾಡಕ್ಕೆ ಧುಮಕಲು ಮುಂದಾಗಿದ್ದಾರೆ.

2028 ರ ಲಾಸ್‌ಏಂಜಲೀಸ್‌ ಒಲಿಂಪಿಕ್ಸ್‌ (2028 LA Olympics)ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್ ತಯಾರಿ ನಡೆಸಿದ್ದಾರೆ. ಈ ಕುರಿತು ಸ್ವತಃ ಅವರೇ ಮಾಹಿತಿ ನೀಡಿದ್ದಾರೆ. ಪ್ಯಾರಿಸ್‌ ಬಳಿಕ ಎಲ್ಲವೂ ಮುಗಿಯಿತೇ ಎಂದು ಜನರು ಕೇಳುತ್ತಲೇ ಇದ್ದರು. ಅಂತಹ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿರಲಿಲ್ಲ. ಒತ್ತಡ, ನಿರೀಕ್ಷೆ ಮತ್ತು ನನ್ನದೇ ಮಹತ್ವಾಕಾಂಕ್ಷೆಗಳಿಂದ ದೂರ ಸರಿದು ನಾನು ನನ್ನನ್ನೇ ಹುಡುಕಿಕೊಳ್ಳಬೇಕಾಯಿತು. ವರ್ಷದ ನಂತರ ನಾನು ಸುಧಾರಿಸಿಕೊಂಡಿದ್ದೇನೆ. ಮೌನದ ಮಧ್ಯೆ ನಾನು ಈ ಕ್ರೀಡೆಯನ್ನು ಇನ್ನೂ ಪ್ರೀತಿಸುತ್ತೇನೆ ಎಂದು ನನಗೆ ಸ್ಪಷ್ಟವಾಯಿತು ಎಂದು ವಿನೇಶ್ ತಿಳಿಸಿದ್ದಾರೆ.

ʻಬೆಂಕಿ ಎಂದಿಗೂ ಆರಲಿಲ್ಲ, ಅದು ಆಯಾಸದ ಅಡಿಯಲ್ಲಿ ಹೂತುಹೋಗಿತ್ತು. ಈಗ ಭಯವಿಲ್ಲದ ಹೃದಯದೊಂದಿಗೆ, ಬಗ್ಗದ ಮನೋಭಾವದೊಂದಿಗೆ ಲಾಸ್ ಏಂಜಲ್ಸ್ LA28 ಕಡೆ ಹೆಜ್ಜೆ ಹಾಕುತ್ತಿದ್ದೇನೆʼ ಎಂದು ವಿನೇಶ್ ಹೇಳಿದ್ದಾರೆ. ವಿನೇಶ್ 2025ರ ಜುಲೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಯಾಣದಲ್ಲಿ ನಾನು ಒಬ್ಬಂಟಿಯಾಗಿಲ್ಲ. ನನ್ನ ಮಗು ನನ್ನೊಂದಿಗೆ ಇದೆ. ಲಾಸ್ ಏಂಜಲ್ಸ್ ಒಲಿಂಪಿಕ್ಸ್ ಕಡೆಗೆ ಸಾಗುವ ಹಾದಿಯಲ್ಲಿ ಅವನೇ ನನ್ನ ಚಿಕ್ಕ ಚಿಯರ್‌ ಲೀಡರ್ ಎಂದು ಭಾವುಕವಾಗಿ ಬರೆದು ಮತ್ತೆ ಅಖಾಡಕ್ಕೆ ಮರಳು ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಕೂಡ ವಿನೇಶ್ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Exit mobile version