ಬೆಂಗಳೂರು: ಲೈಂಗಿಕ ಸಮಸ್ಯೆ ಪರಿಹರಿಸುವುದಾಗಿ ಹೇಳಿ ಬರೋಬ್ಬರಿ 48 ಲಕ್ಷ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಗುರೂಜಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ವಿನಯ್ ಗುರೂಜಿ ಎಂದು ಗುರುತಿಸಲಾಗಿದೆ. ಲೈಂಗಿಕ ಸಮಸ್ಯೆಗೆ ಆಯುರ್ವೇದದ ಮೂಲಕ ಪರಿಹಾರ ನೀಡುವುದಾಗಿ ನಂಬಿಸಿ ಟೆಕ್ಕಿಯೋರ್ವರಿಗೆ ಬರೋಬ್ಬರಿ 48 ಲಕ್ಷ ರೂ. ವಂಚಿಸಿರುವ ಆರೋಪ ಕೇಳಿ ಬಂದಿದೆ. ಬಂಧಿತ ಆರೋಪಿಯು, ರಸ್ತೆ ಪಕ್ಕದಲ್ಲಿ ಟೆಂಟ್‌ನಲ್ಲಿ ಕುಳಿತು ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಜಾಹೀರಾತು ಹಾಕಿ, ನಕಲಿ ಔಷಧಿಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಎನ್ನಲಾಗಿದೆ.
ವಂಚನೆಗೆ ಒಳಗಾಗಿರುವ ಟೆಕ್ಕಿ ಕೆಂಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದರು ಎನ್ನಲಾಗಿದೆ. ಆಗ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಟೆಂಟ್ ನಲ್ಲಿ ದೇವರಾಜ್ ಬೂಟಿ’ ಎಂಬ ಔಷಧಿ ಖರೀದಿಸಲು ಆರೋಪಿ ಹೇಳಿದ್ದಾನೆ. ಒಂದು ಗ್ರಾಂ ಔಷಧಿಗೆ 1.5 ಲಕ್ಷ ರೂ. ಎಂದು ಹೇಳಿ ಟೆಕ್ಕಿಯಿಂದ 1.60 ಲಕ್ಷ ರೂ. ಪಡೆದಿದ್ದಾನೆ. ಆದರೆ, ಆನ್ ಲೈನ್ ನಲ್ಲಿ ಹಣ ಪಾವತಿಸಬಾರದು ಎಂದಿದ್ದಾನೆ. ಟೆಕ್ಕಿ ಕೂಡ ಗುರೂಜಿಯ ಮಾತನ್ನು ನಂಬಿ ಹಣ ನೀಡಿದ್ದಾರೆ ಎನ್ನಲಾಗಿದೆ.
ಆನಂತರ ಹಂತಹಂತವಾಗಿ ಬೇರೆ ಬೇರೆ ಹೆಸರಿನಲ್ಲಿ ಔಷಧಿ ನೀಡಿ ಒಟ್ಟು 48 ಲಕ್ಷ ರೂ. ಹಣ ಲಪಟಾಯಿಸಿದ್ದಾನೆ ಎನ್ನಲಾಗಿದೆ. ಮೋಸ ಹೋದ ಟೆಕ್ಕಿ ಹಣ ಕೇಳಲು ಬಂದರೆ, ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಸದ್ಯ ಮೋಸ ಹೋಗಿರುವ ಟೆಕ್ಕಿಗೆ ಆಯುರ್ವೇದ ಚಿಕಿತ್ಸೆಯಿಂದಾಗಿ ಕಿಡ್ನಿಗೆ ಸಮಸ್ಯೆ ಆಗಿದೆ ಎನ್ನಲಾಗಿದೆ. ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

