ಕರ್ನಾಟಕದ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ಮುಂಗಾರು ಆರಂಭದಲ್ಲೇ ರಾಜ್ಯದಲ್ಲಿ ಸಕ್ರಿಯವಾಗಿದ್ದು, ಭಾರೀ ಮಳೆ ಸುರಿಸುತ್ತಿದೆ. ಮುಂದಿನ ಒಂದು ವಾರ ರಾಜ್ಯದ ಹಲವೆಡೆ ಬಿಟ್ಟು ಬಿಡದೇ ಮಳೆ ಆಗಲಿದೆ. ಇಂದು ಮತ್ತು ನಾಳೆ 7 ಜಿಲ್ಲೆಗಳಿಗೆ 200 ಮಿಲಿ ಮೀಟರ್‌ಗಿಂತಲೂ ಹೆಚ್ಚಿನ ಮಳೆ ಬರುವ ನಿರೀಕ್ಷೆ ಇದ್ದು, ರೆಡ್ ಅಲರ್ಟ್ ನೀಡಲಾಗಿದೆ.
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಉಂಟಾಗಿರುವ ವಾಯುಭಾರ ಕುಸಿತ, ಇತರ ವೈಪರೀತ್ಯಗಳ ಪ್ರಭಾವದಿಂದ ಮುಂಗಾರು ಮಳೆ ಆರಂಭದಲ್ಲೇ ಭಾರೀ ಸದ್ದು ಮಾಡುತ್ತಿದೆ. ಕರಾವಳಿ ಹಾಗೂ ಪಶ್ಚಿಮ ಘಟ್ಟಗಳು ಒಳಗೊಂಡಂತೆ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಕೆಲವೆಡೆ ಜಿಟಿ ಜಿಟಿ ಮಳೆ ಬಂದರೆ, ಇನ್ನೂ ಅನೇಕ ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಈ ವಾಯುಭಾರ ಕುಸಿತದ ಪ್ರಭಾವ ಮುಂದುವರಿಯಲಿದೆ.
ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಎಡೆಬಿಡದೇ ಅತ್ಯಧಿಕ ಭಾರೀ ಮಳೆ ಆಗುವ ನಿರೀಕ್ಷೆ ಇದ್ದು, ಇಂದು ಮತ್ತು ನಾಳೆ ರೆಡ್ ಅಲರ್ಟ್ ನೀಡಲಾಗಿದೆ. ಈಗಾಗಲೇ ಬಂದ ಮಳೆಗೆ ಜೀವ ಹಾನಿ ಸಂಭವಿಸಿವೆ. ಕೆಲವೆಡೆ ಜನ ಜೀವನ ಅಸ್ತವ್ಯಸ್ಥವಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಬ್ಬು ವಾತವರಣ ಸೃಷ್ಟಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿತ್ತನೆ ಕೆಲಸಗಳಲ್ಲಿ ರೈತರು ನಿರತರಾಗಿದ್ದಾರೆ.
Also Read: ಕಪ್ ಗೆಲ್ಲುವ ಭವಿಷ್ಯ ನುಡಿದ RCB ಆಟಗಾರ!
ಮುಂದಿನ ಒಂದು ವಾರದಲ್ಲಿ ಐದು ದಿನ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆ ಬರಲಿದೆ. ಆ ಪೈಕಿ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆ ಅಬ್ಬರಿಸಲಿದ್ದು, ಇವುಗಳಿಗೆ ಮುಂದಿನ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಹಾವೇರಿ, ಗದಗ, ಧಾರವಾಡ ಸೇರಿ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.