ಮೊಬೈಲ್ ನಲ್ಲಿ ಮಾತನಾಡುತ್ತಾ ಡ್ರೈವಿಂಗ್ ಮಾಡುವುದು ಅಪಘಾತಗಳನ್ನ ಕಡಿಮೆ ಮಾಡುವ ದೃಷ್ಠಿಯಿಂದ ಬಿಎಂಟಿಸಿ ಬಸ್ ಚಾಲಕರಿಗೆ ಹೊಸ ನಿಯಮ ಜಾರಿ ಮಾಡಲಾಗುತ್ತಿದೆ.
ಈ ಕುರಿತು ಬಿಎಂಟಿಸಿ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಮಾತನಾಡಿ ಮಾಹಿತಿ ನೀಡಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆಯ ಬಸ್ ಚಾಲಕರು ಎರಡು ಸಲ ಅಪಘಾತವೆಸಗಿ, ತಪ್ಪು ಸಾಬೀತಾದರೇ ಕೆಲಸದಿಂದಲೇ ವಜಾ ಮಾಡಲಾಗುತ್ತದೆ. ಚಾಲನೆ ವೇಳೆ ಫೋನ್ ನಲ್ಲಿ ಮಾತನಾಡಿದರೇ ಕೆಲಸದಿಂದ ಅಮಾನತು ಮಾಡಲಾಗುತ್ತದೆ. ಈ ಹೊಸ ನಿಯಮ ಇಂದಿನಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಮೊದಲ ಸಲ ಅಪಘಾತವೆಸಗಿದ್ದರೇ 6 ತಿಂಗಳು ಸಸ್ಪೆಂಡ್. ಅಮಾನತು ಅವಧಿ ಮುಗಿದ ಮೇಲೆ ತರಬೇತಿ ನೀಡಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ. ಮೊದಲ ಸಲ ಅಪಘಾತವೆಸಗಿದ ಚಾಲಕರಿಗೆ ಮೂರು ಇನ್ಕ್ರಿಮೆಂಟ್ ಕಡಿತಗೊಳಿಸಲಾಗುತ್ತದೆ. ಎರಡನೇ ಸಲ ಅಪಘಾತವೆಸಗಿದರೆ ಬಿಎಂಟಿಸಿ ಸಂಸ್ಥೆಯಿಂದಲೇ ವಜಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಬಸ್ ಚಾಲಕರು ಚಾಲನೆ ವೇಳೆ ವೇಳೆ ಫೋನ್ ನಲ್ಲಿ ಮಾತಾಡಿದರೇ, ಬಸ್ ಕಂಪನಿಗೆ 5 ಸಾವಿರ ರೂಪಾಯಿ ದಂಡ,15 ದಿನಗಳ ಕಾಲ ಅಮಾನತು ಮಾಡಲಾಗುತ್ತದೆ. ಸೋಮವಾರದಿಂದ ಬಿಎಂಟಿಸಿ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಎಂದು ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ.

