ಕನ್ನಡಿಗರನ್ನ ಕೆಣಕಿದ್ದಾಯ್ತು.. ಕನ್ನಡ ಭಾಷೆಗೆ ಅವಮಾನ ಮಾಡಿದ್ದಾಯ್ತು.. ಕನ್ನಡ ನಟನ ಮುಂದೆಯೇ ಉದ್ಧಟತನವನ್ನೂ ಮೆರಿದಿದ್ದಾಯ್ತು.. ಇದ್ರಿಂದ ಇಡೀ ಕರ್ನಾಟದಲ್ಲಿ ತಮಿಳು ನಟ ಕಮಲ್ ಹಾಸನ್ ಮೇಲಿದ್ದ ಗೌರವ, ಅಭಿಮಾನ ನುಚ್ಚು ನೂರಾಗಿದೆ.. ಹೊಗಳುತ್ತಿದ್ದ ಕನ್ನಡ ಪ್ರೇಕ್ಷಕರೇ ಕ್ಯಾಕರಿಸಿ ಉಗಿಯುತ್ತಿದ್ದಾರೆ.. ಆ ನಟನ ಭಾವಚಿತ್ರವನ್ನು ಸುಟ್ಟು ಭಸ್ಮ ಮಾಡಿ ಆಕ್ರೋಶ ಹೊರಹಾಕ್ತಿದ್ದಾರೆ.. ಅಷ್ಟೇ ಅಲ್ಲ ಆತನ ಸಿನಿಮಾ ರಿಲೀಸ್‌ಗೂ ಬ್ರೇಕ್ (Thug Life controversy) ಹಾಕಲು ಮುಂದಾಗಿದ್ದಾರೆ.. ಇಷ್ಟಾದ್ರೂ ತನ್ನ ಹುಚ್ಚುತನವನ್ನು ಒಪ್ಪಿಕೊಂಡು ಕ್ಷಮೆ ಕೇಳದ ಕಮಲ್ ಕನ್ನಡಿಗರಿಗೆ ಸವಾಲ್ ಹಾಕಿದ್ದಾರೆ.. ಭಾಷಾ ಯುದ್ಧದಲ್ಲಿ ನಾನಾ ನೀನಾ ನೋಡೇಬಿಡೋಣ ಅಂತ ಸಮರ ಸಾರಿದ್ದಾರೆ..
ಎಸ್, ಮಾಡಿದುಣ್ಣೋ ಮಹರಾಯ ಎಂಬಂತೆ ತನ್ನ ಸಿನಿಮಾ ಪ್ರಮೋಷನ್ ಮಾಡಿಕೊಂಡು ತೆಪ್ಪಗಿದಿದ್ರೆ ಎಲ್ಲವೂ ಸರಿ ಇರ್ತಿತ್ತು.. ಅದನ್ನು ಬಿಟ್ಟು ಕನ್ನಡ ನಟ ಶಿವರಾಜ್ ಕುಮಾರ್‌ರನ್ನ ಮೆಚ್ಚಿಸುವ ಭರದಲ್ಲಿ ಅವಿವೇಕಿತನ ಮೆರೆದ ಕಮಲ್ ಹಾಸನ್ ತಮಿಳಿಂದಲೇ ಕನ್ನಡ ಹುಟ್ಟಿದ್ದು ಅಂತ ಹೇಳಿಕೆ ನೀಡಿರೋದೇ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ.. ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಿಲ್ಲ ಅನ್ನುವಂತೆ ತಪ್ಪು ಮಾಡಿದ್ರೂ ಅದನ್ನ ಒಪ್ಪಿಕೊಳ್ಳದ ಕಮಲ್ ಕನ್ನಡಿಗರ ಬಳಿ ಕ್ಷಮೆ ಕೇಳಲು ಬಿಲ್‌ಕುಲ್ ರೆಡಿ ಇಲ್ಲ.. ಹೀಗಾಗಿ ಅವ್ರಿಗೆ ತಕ್ಕ ಪಾಠ ಕಲಿಸಬೇಕು ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಥಗ್ ಲೈಫ್ ಸಿನಿಮಾ ಬ್ಯಾನ್ ಮಾಡಿದೆ.. ಇಷ್ಟಾದ್ರೂ ಕಮಲ್ ಮಾತ್ರ ಅವರ ಸಿನಿಮಾ ರಕ್ಷಣೆಗೆ ಕಾನೂನು ಮೊರೆ ಹೋಗಿದ್ದಾರೆ..
ಕನ್ನಡಿಗರ ಆಕ್ರೋಶ ಜ್ವಾಲೆ ಮಧ್ಯೆಯೂ ಕಮಲ್ ಕ್ಷಮೆ ಕೇಳೋದು ಬಿಟ್ಟು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.. ತನ್ನ ಸಿನಿಮಾಗೂ ತಾನು ನೀಡಿರುವ ಭಾಷೆ ಬಗ್ಗೆ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ.. ಥಗ್ ಲೈಫ್ ಸಿನಿಮಾಗೆ ನಿರ್ಬಂಧ ಹೇರಿರೋದು ಸರಿಯಿಲ್ಲ.. ಹೀಗಾಗಿ ಚಿತ್ರದ ಬಿಡುಗಡೆಗೆ ಅವಕಾಶ ಕಲ್ಪಿಸಬೇಕು ಅಂತ ರಾಜ್ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಸಂಸ್ಥೆ ಮೂಲಕ ಅರ್ಜಿ ಸಲ್ಲಿಸಿದ್ದಾರೆ.. ಜೊತೆಗೆ ತನ್ನ ಸಿನಿಮಾ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು.. ಪ್ರದರ್ಶನ ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ, ವಾಣಿಜ್ಯ ಮಂಡಳಿಗೆ ಸೂಚಿಸಬೇಕು ಅಂತಲೂ ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.. ಈ ನಡೆ ಕನ್ನಡಿಗರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ..
ಮುಳ್ಳಿಂದ ಸರಿಪಡಿಸೋ ಸಮಸ್ಯೆಗೆ ಕಮಲ್ ಈಗ ಮಚ್ಚು ಹಿಡಿದಿದ್ದಾರೆ.. ಕ್ಷಮೆ ಕೇಳಿ ಸರಿಪಡಿಸಿಕೊಳ್ಳುವ ಬದಲು ಕಾನೂನು ಸಮರ ಸಾರಿದ್ದಾರೆ.. ಒಂದ್ಕಡೆ ಕಮಲ್ ವಿರುದ್ಧ ಕಿಡಿಕಾರುತ್ತಿರುವ ಕನ್ನಡ ಪರ ಸಂಘಟನೆಗಳು.. ಮತ್ತೊಂದ್ಕಡೆ ನಾನ್ ಕ್ಷಮೆ ಕೇಳಲ್ಲ ಅಂತ ಕಮಲ್ ಮೊಂಡುತನ.. ಇದೆಲ್ಲದರ ಮಧ್ಯೆ ಕಮಲ್ ಸಿನಿಮಾ ರಿಲೀಸ್ ಆಗುತ್ತಾ ಅನ್ನೋದೇ ಸದ್ಯದ ಪ್ರಶ್ನೆ..

