ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಮಾಜಿ ಸಂಸದ ಪ್ರತಾಪ್ ಸಿಂಹಗೆ ಛಿಮಾರಿ ಹಾಕಿ, ಸಲ್ಲಿಸಿದ ಪಿಐಎಲ್‌ನ ಸಿಜೆ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ಪೀಠ ವಜಾಗೊಳಿಸಿತ್ತು. ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ತೀವ್ರ ಬೇಸರ ವ್ಯಕ್ತಪಡಿಸಿದರು.
ಹೈಕೋರ್ಟ್‌ನಲ್ಲಿ ಅರ್ಜಿ ವಜಾ ವಿಚಾರದ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ಮುಡಾದಲ್ಲಿ 14 ಸೈಟುಗಳನ್ನು ಪಡೆದು ಹಗಲುದರೋಡೆ ಮಾಡಿದ್ದ ಪ್ರಕರಣವನ್ನೇ ವಜಾ ಮಾಡಲಾಗಿತ್ತು. ಹಾಗೆಯೇ ಧರ್ಮಸ್ಥಳದ ಮೇಲೆ ಅಪನಂಬಿಕೆ ಬರುವಂಥ ವಿಡಿಯೋ ಮಾಡಿದ್ದ ಸಮೀರ್‌ಗೆ ಸೆಷನ್ ಕೋರ್ಟ್ ಜಾಮೀನು ಕೊಡ್ತು. ಮಹೇಶ್ ತಿಮರೋಡಿ ಕೂಡ ಆರಾಮವಾಗಿ ಓಡಾಡಿಕೊಂಡಿದ್ದಾನೆ. ನಾನು ನ್ಯಾಯ ಸಿಗುವ ಸಣ್ಣ ಭರವಸೆಯಿಂದ ಹೈಕೋರ್ಟ್‌ಗೆ ಪಿಐಎಲ್ ಹಾಕಿದ್ದೆ. ಆದರೆ ಹೈಕೋರ್ಟ್ ಬಾನು ಮುಷ್ತಾಕ್ ಅವರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಅನ್ನೋ ಸಣ್ಣ ಕಾರಣ ನೀಡಿ ನನ್ನ ಪಿಐಎಲ್ ವಜಾ ಮಾಡ್ತು. ಆದೇಶದ ಬಗ್ಗೆ ನಾನು ಮಾತಾಡಲ್ಲ, ಬಾನು ಮುಷ್ತಾಕ್ ಅವರ ಹೇಳಿಕೆಯನ್ನು ಭಾವಾನುವಾದ ಮಾಡಿ ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ್ವಿ, ಇಷ್ಟಾದ್ರೂ ಸೆಕ್ಯುಲರ್ ಅಂತ ಹೇಳಿ ಪಿಐಎಲ್ ವಜಾ ಮಾಡಲಾಯ್ತು. ಇಂದಿರಾಗಾಂಧಿ ತಂದ ಸೆಕ್ಯುಲರ್ ಪದದ ಕಾರಣ ಇಟ್ಕೊಂಡು ನನ್ನ ಪಿಐಎಲ್ ವಜಾ ಮಾಡಲಾಯ್ತು. ಸತ್ಯಂ ಶಿವಂ ಸುಂದರಂ ಹೇಳಿಕೆಯನ್ನೂ ವಾಕ್ ಸ್ವಾತಂತ್ರ್ಯ, ಸೆಕ್ಯುಲರ್ ಕಾರಣಕ್ಕೆ ತೆಗೀತೀರಾ? ಭಾರತದ ಮೂಲ ಸಂಸ್ಕೃತಿಗೆ ಧಕ್ಕೆ ಬರುವಂಥ ಹೇಳಿಕೆ ಸೆಕ್ಯುಲರ್, ವಾಕ್ ಸ್ವಾತಂತ್ರ್ಯ ಹಕ್ಕಿನಡಿ ಇದೆ ಅಂದ್ರೆ ನಾನೇನೂ ಹೇಳೋಕ್ಕಾಗಲ್ಲ, ಬಾನು ಮುಷ್ತಾಕ್ ಭುವನೇಶ್ವರಿ ಬಗ್ಗೆ, ಅರಿಶಿನ ಕುಂಕುಮದ ಬಗ್ಗೆ ಕೊಟ್ಟ ಹೇಳಿಕೆಗೆ ಕನಿಷ್ಠ ಕ್ಷಮೆ ಕೋರಿಲ್ಲ, ಅದಕ್ಕಾಗಿ ನಾನು ಕೋರ್ಟ್ ಮೊರೆ ಹೋದೆ. ಸೆಕ್ಯುಲರ್ ಚೌಕಟ್ಟಿಗೆ ತಂದು ಕೋರ್ಟ್ ಅರ್ಜಿ ವಜಾ ಮಾಡಿದೆ. ಭಾರತದ ಮೂಲ ಸಂಸ್ಕೃತಿಗೆ ಇದೇ ರೀತಿ ಅಪಮಾನ, ಧಕ್ಕೆ ಆಗೋದನ್ನೂ ಸಹಿಸಿಕೊಳ್ತೀರಾ? ಎಲ್ಲವನ್ನು ಸೆಕ್ಯುಲರ್ ಪರಿಧಿಯಲ್ಲಿ ನೋಡೋದು ಎಷ್ಟು ಸರಿ? ಎಂದು ಪ್ರತಾಪ್ ಸಿಂಹ ಬೇಸರ ಹೊರಹಾಕಿದರು.
Read Also : ರಾಜಕೀಯವಾಗಿ ಬದುಕಿದ್ದೇನೆ ಅಂತ ತೋರಿಸಿಕೊಳ್ಳುವ ಪ್ರಯತ್ನ : ಪ್ರತಾಪ್ ಸಿಂಹಗೆ ಡಿಕೆಶಿ ಪಂಚ್

