ಚಿಕ್ಕಮಗಳೂರು: ಅಯ್ಯಪ್ಪ ಮಾಲೆ ಧರಿಸುವುದು ಧಾರ್ಮಿಕ ಆಚರಣೆಯ ಒಂದು ಭಾಗ. ಇತ್ತೀಚೆಗೆ ಮಾಲೆ ಧರಿಸುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆದರೆ, ಇದರ ಮಧ್ಯೆ ಧಾರ್ಮಿಕ ಭಾವನೆಗಳಿಗೆ ಭಂಗ ತರುತ್ತಿರುವ ಘಟನೆಗಳು ಕೂಡ ವರದಿಯಾಗುತ್ತಿವೆ.
ಚಿಕ್ಕಮಗಳೂರಿನ (Chikkamgaluru) MES ಪಿಯು ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ತರಗತಿಗೆ ಬಂದಿದ್ದಕ್ಕೆ ಪ್ರಿನ್ಸಿಪಾಲ್ ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಅಲ್ಲದೇ, ಮಾಲಾಧಾರಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ನಗರದ ಸಂತ ಜೋಸೆಫ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಬಂದಿದ್ದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಯನ್ನು ಶಿಕ್ಷಕರು ಹೊಡೆದು ಶಾಲೆಯಿಂದ ಹೊರ ಕಳಿಸಿದ್ದಾರೆ ಎಂದು ಮಕ್ಕಳು ಮತ್ತು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಭಜರಂಗದಳ ಕಾರ್ಯಕರ್ತರು ಹಾಗೂ ನೂರಾರು ಅಯ್ಯಪ್ಪ ಮಾಲಾಧಾರಿಗಳು ಈ ಘಟನೆ ಖಂಡಿಸಿದ್ದಾರೆ. ಅಲ್ಲದೇ, ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ಪ್ರತಿಭಟನೆ ನಂತರ ಶಾಲಾ ಆಡಳಿತ ಮಂಡಳಿ ಅಯ್ಯಪ್ಪ ಮಾಲಾಧಾರಿಗಳ ಬಳಿ ಕ್ಷಮೆ ಯಾಚಿಸಿದೆ. ಈ ಹಿಂದೆ ಕೂಡ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ಕೂಡ ನಡೆದಿತ್ತು. ಈಗ ಮತ್ತೆ ಇಂತಹುದೊಂದು ಘಟನೆ ನಡೆದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

