ಬೆಂಗಳೂರು: ಸಿಲಿಕಾನ್ ಸಿಟಿಯ ಯಲಹಂಕ ಹತ್ತಿರದ ಕೋಗಿಲು ಬಡಾವಣೆ ತ್ಯಾಜ್ಯ ವಿಲೇವಾರಿ ಜಾಗದ ಅಕ್ರಮ ಒತ್ತುವರಿ ತೆರವು ಪ್ರಕರಣ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಈ ವಿಷದಲ್ಲಿ ಮೂಗು ತೂರಿಸಿದ್ದಾರೆ. ಕೆ.ಸಿ. ವೇಣುಗೋಪಾಲ್ ಕೂಡ ಈ ವಿಷಯವಾಗಿ ಮಾತನಾಡಿದ್ದು, ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಸ್ವಾಭಿಮಾನವನ್ನು ಕೇರಳಕ್ಕೆ ಅಡವಿಟ್ಟಿದೆ ಎಂದು ಗಂಭೀರ ಆರೋಪ ಮಾಡಿದೆ.
ಈ ಕುರಿತು ಎಕ್ಸ್ ನಲ್ಲಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. “ಕನ್ನಡದ ಸ್ವಾಭಿಮಾನವನ್ನು ಕೇರಳದ ಮುಂದೆ ಅಡವಿಟ್ಟಿರುವ ಭಂಡ ಹಾಗೂ ಭ್ರಷ್ಟರು!!” ಎಂದು ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಕೋಗಿಲು ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೇರಳ ನಾಯಕರ ಮಧ್ಯಪ್ರವೇಶಕ್ಕೆ ಬಿಜೆಪಿ ತೀವ್ರ ಕಿಡಿಕಾರುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಕನ್ನಡಿಗರ ಆತ್ಮಗೌರವ ಮಣ್ಣುಪಾಲು ಮಾಡಿದ ಆರೋಪ ಹೊರಿಸಿದೆ. ಈ ವಿಷಯದಲ್ಲಿ ಸಿಎಂ ಹಾಗೂ ಡಿಸಿಎಂ ನಡೆಯನ್ನು ಖಂಡಿಸಿದೆ.
ಪಿಣರಾಯಿ ವಿಜಯನ್, ಕರ್ನಾಟಕ ಸರ್ಕಾರ ಉತ್ತರ ಪ್ರದೇಶ ಸರ್ಕಾರದ “ಬುಲ್ಡೋಜರ್ ರಾಜ್ ನೀತಿ” ಅನುಸರಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದರು. ತಿರುಗೇಟು ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ, “ವಾಸ್ತವ ಸಂಗತಿಗಳನ್ನು ಮರೆಮಾಚಿ ರಾಜಕೀಯ ಟೀಕೆ ಮಾಡುವುದು ಸರಿಯಲ್ಲ” ಎಂದು ಗುಡುಗಿದ್ದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಕೂಡ, ಅವರ ಪ್ರಕ್ರಿಯೆಗಳು ಅನಗತ್ಯ ಎಂದಿದ್ದರು. ಇದೇ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, “ಕೇರಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ರಾಜಕೀಯ ನಾಯಕರು ಕೋಗಿಲು ಬಡಾವಣೆಯ ಅಕ್ರಮ ನಿವಾಸಿಗಳ ತೆರವುಗೊಳಿಸಿರುವ ಕ್ರಮವನ್ನು ಖಂಡಿಸುತ್ತಿದ್ಧಾರೆ. ಇದಕ್ಕೆ ರಾಜ್ಯ ಕಾಂಗ್ರೆಸ್ ನವರು ಅವಕಾಶ ಮಾಡಿಕೊಟ್ಟಿದ್ದಾರೆಂದು ಗುಡುಗಿದ್ದರು.

