ಬೆಂಗಳೂರು: ಬಸ್ (Bus) ಹಾಗೂ ಬೈಕ್ (Bike) ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು – ತುಮಕೂರು 48 ಹೆದ್ದಾರಿಯ ಮಾದನಾಯಕನಹಳ್ಳಿ (Madanayakanahalli) ಹತ್ತಿರ ನಡೆದಿದೆ. ನಾಗಸಂದ್ರದ ವಿದ್ಯಾನಗರ ನಿವಾಸಿ ಸುಮಂತ್ ಜೆ ಗೌಡ (21) ಸಾವನ್ನಪ್ಪಿರುವ ದುರ್ದೈವಿ. ಸುಮಂತ್ ತನ್ನ ಸ್ನೇಹಿತನನ್ನು ಕಾಣಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಚಲಿಸುತ್ತಿದ್ದ ಖಾಸಗಿ ಬಸ್ ನ್ನು ಚಾಲಕ ಏಕಾಏಕಿ ನಿಲ್ಲಿಸಿದ್ದಾನೆ. ಹೀಗಾಗಿ ಬಸ್ ನ ಹಿಂದೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ನ್ನು ಸುಮಂತ್ ಚಲಾಯಿಸುತ್ತಿದ್ದ ಎನ್ನಲಾಗಿದೆ.
ಖಾಸಗಿ ಬಸ್ ನ್ನು ಏಕಾಏಕಿ ನಿಲ್ಲಿಸಿದ ಹಿನ್ನೆಲೆಯಲ್ಲಿ ನಿಯಂತ್ರಣ ಸಿಗದ ಕಾರಣ ಬೈಕ್, ಹಿಂದಿನಿಂದ ಬಸ್ ಗೆ ಡಿಕ್ಕಿಯಾಗಿದೆ. ವೇಗವಾಗಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿ ಸುಮಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

