ಬೆಂಗಳೂರು : ಮಹಿಳಾ ನೇತೃತ್ವದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSMEs) ಬೆಳವಣಿಗೆಗೆ ತಂತ್ರಜ್ಞಾನ ಅಳವಡಿಕೆ ಮತ್ತು ನಾವೀನ್ಯತೆ ಅತ್ಯಗತ್ಯ ಎಂದು ಬೆಂಗಳೂರಿನ ಎಂಎಸ್‌ಎಂಇ-ಡಿಎಫ್‌ಒ ಜಂಟಿ ನಿರ್ದೇಶಕ ಹಾಗೂ ಕಚೇರಿ ಮುಖ್ಯಸ್ಥ ಐಇಡಿಎಸ್ ದೇವರಾಜ್.ಕೆ ಹೇಳಿದರು.
ಎಂಎಸ್‌ಎಂಇ-ಡಿಎಫ್‌ಒ (MSME DFO) ಬೆಂಗಳೂರು, ಉಬುಂಟು ಮಹಿಳಾ ಉದ್ಯಮಿ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ನಗರದ ಆಡಳಿತ ಸಂಶೋಧನಾ ಸಂಸ್ಥೆ, ಐಎಎಸ್ ಆಫೀಸರ್ಸ್ ಅಸೋಸಿಯೇಷನ್ ಆವರಣದಲ್ಲಿ “ತಂತ್ರಜ್ಞಾನ ಅಳವಡಿಕೆ – ಎಂಎಸ್‌ಎಂಇ ಬೆಳವಣಿಗೆಗೆ ಸಬಲೀಕರಣ” ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಸಬ್ಸಿಡಿ, ಮರುಪಾವತಿ ಪ್ರಯೋಜನಗಳು, ಉಚಿತ ಕೌಶಲ್ಯ ಕಾರ್ಯಕ್ರಮಗಳು, ಪೇಟೆಂಟ್ ಹಾಗೂ ಸುಧಾರಿತ ತಂತ್ರಜ್ಞಾನಗಳಿಂದ ಮಹಿಳಾ ಉದ್ಯಮಿಗಳು ಹಿಂದೆಂದಿಗಿಂತಲೂ ಈಗ ಬಲವಾದ ಸಾಂಸ್ಥಿಕ ಬೆಂಬಲವನ್ನು ಪಡೆಯುತ್ತಿದ್ದಾರೆ. ಈ ಉಪಕ್ರಮಗಳು ಮಹಿಳೆಯರಿಗೆ ಸೂಕ್ಷ್ಮ ಘಟಕಗಳಿಂದ ಹಿಡಿದು ಸ್ಪರ್ಧಾತ್ಮಕ ಉತ್ಪಾದನಾ ಉದ್ಯಮಗಳಿಗೆ ಬದಲಾಗಲು, ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತವೆ. ಭಾರತದ ಎಂಎಸ್‌ಎಂಇ ವಲಯದಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸಿ, ಮಹಿಳೆಯರಿಗಾಗಿ ಪ್ರತ್ಯೇಕ ವಿಚಾರ ಸಂಕಿರಣಗಳನ್ನು ಕಡ್ಡಾಯವಾಗಿ ನಡೆಸುವಂತೆ ಸಚಿವಾಲಯವು ನಿರ್ದೇಶಿಸಿದೆ ಎಂದರು.
ಮಹಿಳಾ ಉದ್ಯಮಿಗಳಿಗೆ ವ್ಯಾಪಾರ ಮೇಳಗಳು, ಪ್ರದರ್ಶನ/ಎಕ್ಸ್ಪೋಗಳಿಗೆ ಪೂರ್ಣ ಮರುಪಾವತಿ, ಲೀನ್ (Lean) ಮತ್ತು ZED ಪ್ರಮಾಣೀಕರಣದಡಿಯಲ್ಲಿ ಹೆಚ್ಚುವರಿ ಪ್ರೋತ್ಸಾಹ ಮತ್ತು ಎಲ್ಲಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಶುಲ್ಕ ರಹಿತ ಭಾಗವಹಿಸುವಿಕೆಗೆ ಅವಕಾಶವಿದೆ. ಸಾರ್ವಜನಿಕ ವಲಯದ ಉದ್ದಿಮೆಗಳು (PSUs) ಮಹಿಳಾ ನೇತೃತ್ವದ ಘಟಕಗಳಿಂದ ಮೂರು ಪ್ರತಿಶತದಷ್ಟು ಸರಕು ಮತ್ತು ಸೇವೆಗಳನ್ನು ಕಡ್ಡಾಯವಾಗಿ ಖರೀದಿಸಬೇಕು. ಆದರೆ, ಪ್ರಸ್ತುತ 1.37 ಪ್ರತಿಶತದಷ್ಟಿದೆ. ಈ ನಿಟ್ಟಿನಲ್ಲಿ ಉತ್ಪಾದನಾ ವಲಯದಲ್ಲಿ ಮಹಿಳೆಯರು ಪ್ರವೇಶಿಸಬೇಕು ಎಂದು ಪ್ರೋತ್ಸಾಹದಾಯಕ ನುಡಿಗಳನ್ನಾಡಿದರು.
ತಂತ್ರಜ್ಞಾನವು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ, ಡಿಜಿಟಲ್ ಮಾರುಕಟ್ಟೆ ಮತ್ತು ಜಾಗತಿಕ ಪೂರೈಕೆ ಸರಪಳಿಗಳ ಮೂಲಕ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಚೀನಾ, ತೈವಾನ್ ಮತ್ತು ವಿಯೆಟ್ನಾಂನಿಂದ ಉಂಟಾಗುವ ವೆಚ್ಚದ ಒತ್ತಡಗಳಿಗೆ ಸಂಬಂಧಿಸಿದಂತೆ ಎಂಎಸ್‌ಎಂಇಗಳು ಹಂಚಿಕೊಂಡ ಸವಾಲುಗಳ ಆಧಾರದ ಮೇಲೆ ಸಚಿವಾಲಯವು ನೀತಿಯನ್ನು ರೂಪಿಸುತ್ತಿದೆ. ಈ ವೇಳೆ ಬೌದ್ಧಿಕ ಆಸ್ತಿಗಳ ವಾಣಿಜ್ಯೀಕರಣಕ್ಕೆ ಬೆಂಬಲ ನೀಡುವ (SCIP) ಯೋಜನೆಗಳ ಕುರಿತು ಉಲ್ಲೇಖಿಸಿ, ಇದರ ಅಡಿಯಲ್ಲಿ ಭಾರತೀಯ ಪೇಟೆಂಟ್ ಪರವಾನಗಿಗಾಗಿ ಸರ್ಕಾರವು 10 ಲಕ್ಷದವರೆಗೆ ಮತ್ತು ವಿದೇಶಿ ಪೇಟೆಂಟ್‌ಗಳಿಗಾಗಿ 15 ಲಕ್ಷದವರೆಗೆ ಮರುಪಾವತಿ ಮಾಡುತ್ತದೆ, ಇದು ವೆಚ್ಚದ 70 ಪ್ರತಿಶತವನ್ನು ಒಳಗೊಂಡಿದೆ. ಟ್ರೇಡ್‌ಮಾರ್ಕ್‌ಗಳು, ಕೃತಿಸ್ವಾಮ್ಯಗಳು, ದತ್ತಾಂಶಗಳು, ಜ್ಞಾನ ಮತ್ತು ಸಂಶೋಧನಾ ಆಸ್ತಿಗೂ ಸಹ ನೆರವು ಲಭ್ಯವಿದೆ ಎಂದು ತಿಳಿಸಿದರು.
ಉಬುಂಟು ಶೈಕ್ಷಣಿಕ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ (R&D) ಸಂಸ್ಥೆಗಳೊಂದಿಗೆ ಸೇರಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು. CSIR, CFTRI ಮತ್ತು ಇತರ ಪ್ರಯೋಗಾಲಯಗಳು ತಂತ್ರಜ್ಞಾನಗಳಿಗೆ ಪರವಾನಗಿ ನೀಡಲು ಮತ್ತು ನಾವೀನ್ಯತೆ ಕುರಿತು ಸಹಯೋಗ ಕೊಡಲು ಸಿದ್ಧವಾಗಿವೆ. ಅನೇಕ ಕಾಲೇಜುಗಳು ವರ್ಷಕ್ಕೆ 50ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಸಲ್ಲಿಸುತ್ತಿವೆ. ಸಮಸ್ಯೆ ಪರಿಹರಿಸುವಿಕೆ ಮತ್ತು ಉತ್ಪನ್ನ ಅಭಿವೃದ್ಧಿಯ ಕುರಿತು ಎಂಎಸ್‌ಎಂಇಗಳೊಂದಿಗೆ ಕೆಲಸ ಮಾಡಲು ಉತ್ಸುಕವಾಗಿವೆ. ವೈವಿಧ್ಯಮಯ ಉನ್ನತ ಮೌಲ್ಯದ ಉತ್ಪಾದನೆಯಲ್ಲಿ ತೊಡಗಲು ಬಯಸುವ ಮಹಿಳೆಯರಿಗೆ ಹೊಸ ಸಾಧ್ಯತೆಗಳನ್ನು ನೀಡುವ, ದೇಶೀಯಕರಣಕ್ಕೆ ಮುಕ್ತವಾಗಿರುವ ರಕ್ಷಣಾ ಘಟಕಗಳನ್ನು ಪಟ್ಟಿ ಮಾಡುವ ಸೃಜನ್ ಡಿಫೆನ್ಸ್ ಪೋರ್ಟಲ್ ನಲ್ಲಿನ ಅವಕಾಶಗಳನ್ನು ನೀವು ತಿಳಿಯಬೇಕು ಎಂದರು.

ಕಾರ್ಯಕ್ರಮದ ಗೌರವ ಅತಿಥಿಗಳಾದ ಎನ್‌ಎಸ್‌ಎಸ್‌ಎಚ್‌ಒ (NSSHO), ಬೆಂಗಳೂರಿನ ಶಾಖಾ ಮುಖ್ಯಸ್ಥರಾದ ಕೋಕಿಲಾ ಎ ಮಾತನಾಡಿ, ಇಂದಿನ ಕೈಗಾರಿಕಾ ವಲಯವು ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವುದಕ್ಕೆ ಪ್ರಮುಖ ಕಾರಣ ತಂತ್ರಜ್ಞಾನ. ಹಾಗಾಗಿ ತಂತ್ರಜ್ಞಾನ ಕಲಿಕೆ ಮತ್ತು ಅಳವಡಿಕೆ ಅತ್ಯಗತ್ಯ. ಸರ್ಕಾರದ ಡಿಜಿಹಾತ್ (DigiHaat) (ಸಣ್ಣ ಉತ್ಪಾದಕರು, ಕುಶಲಕರ್ಮಿಗಳು ಮತ್ತು ಭಾರತದಲ್ಲಿನ ಎಂಎಸ್‌ಎಂಇಗಳಿಗಾಗಿ ವಿನ್ಯಾಸಗೊಳಿಸಲಾದ ONDC ನೆಟ್‌ವರ್ಕ್‌ನಲ್ಲಿನ ಒಂದು ಉಚಿತ ಇ-ಕಾಮರ್ಸ್ ಅಪ್ಲಿಕೇಶನ್ ಮತ್ತು ಮಾರುಕಟ್ಟೆ) ಹೆಸರನ್ನು ಉಲ್ಲೇಖಿಸಿದರು. ಸಣ್ಣ ಉತ್ಪಾದಕರಿಗೆ ಇದೊಂದು ಉಚಿತ ಮಾರುಕಟ್ಟೆಯ ವೇದಿಕೆಯಾಗಿದ್ದು, ಇಲ್ಲಿ ಕ್ಯಾಟಲಾಗ್ ಮತ್ತು ಆನ್‌ಬೋರ್ಡಿಂಗ್ ವೆಚ್ಚಗಳನ್ನು ಮಾತ್ರ ಭರಿಸಲಾಗುತ್ತದೆ. ಖಾಸಗಿ ಇ-ಕಾಮರ್ಸ್ ವೇದಿಕೆಗಳಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಲು ಒದ್ದಾಡುತ್ತಿರುವ ಮತ್ತು ಮನೆಯಿಂದ ಕೆಲಸ ಮಾಡುವ ಮಹಿಳೆಯರಿಗೆ ಈ ವೇದಿಕೆಯು ಹೆಚ್ಚು ನೇರವಾಗಲಿದೆ ಎಂದರು.
ಈ ವಿಚಾರ ಸಂಕಿರಣವು ತಂತ್ರಜ್ಞಾನ ಅಳವಡಿಕೆ ಮತ್ತು ನಾವೀನ್ಯತೆ ಮೂಲಕ ಮಹಿಳಾ ನೇತೃತ್ವದ ಎಂಎಸ್‌ಎಂಇಗಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಒಳಗೊಂಡಿತ್ತು. ಸಿಎಸ್‌ಐಆರ್-ಎಫ್‌ಟಿಆರ್‌ಐ ಮೈಸೂರು, ಸಿಎಂಟಿಐ ಬೆಂಗಳೂರು, ಸಿಐಸಿಟಿ, ಕೊಯಿರ್ ಬೋರ್ಡ್ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ತಜ್ಞರು ನಾಲ್ಕು ತಂತ್ರಜ್ಞಾನ ವಲಯಗಳ ಕುರಿತ ಸೆಷನ್‌ಗಳು ನಡೆದವು. ಮಹಿಳಾ ಉದ್ಯಮಿಗಳಿಗೆ ಸರ್ಕಾರಿ ಯೋಜನೆಗಳು ಮತ್ತು ಎಂಎಸ್‌ಎಂಇ ಬೆಂಬಲ ನೀಡುವ ಉಪಕ್ರಮಗಳ ಕುರಿತು ಬೆಂಗಳೂರಿನ ಎಂಎಸ್‌ಎಂಇ-ಡಿಎಫ್‌ಒ, ಐಇಡಿಎಸ್, ಸಹಾಯಕ ನಿರ್ದೇಶಕರಾದ ಶಿವಕುಮಾರ್ ಎ ಅವರು ವಿಶೇಷ ಮಾಹಿತಿಗಳನ್ನು ಹಂಚಿಕೊಂಡರು.
ಇಂದಿನ ಸೆಷನ್ಸ್ ಗಳಲ್ಲಿ ಎಂಎಸ್‌ಎಂಇ ಬೆಳವಣಿಗೆಯನ್ನು ಸಬಲೀಕರಣಗೊಳಿಸಲು ತಂತ್ರಜ್ಞಾನ ಅಳವಡಿಕೆ, ಉತ್ಪಾದನಾ ತಂತ್ರಜ್ಞಾನಗಳು ಮತ್ತು ವಿವಿಧ ವಲಯಗಳಿಗೆ ನಿರ್ದಿಷ್ಟವಾದ ನಾವೀನ್ಯತೆಗಳ ಕುರಿತು ತಿಳಿಸಲಾಯಿತು. ಇದರೊಂದಿಗೆ ಮಹಿಳಾ ಉದ್ಯಮಿಗಳು ತಮ್ಮ ಆವಿಷ್ಕಾರಗಳನ್ನು ಮುಂದುವರೆಸಲು ನೆರವಾಗುವ ಬೌದ್ಧಿಕ ಆಸ್ತಿ ಹಕ್ಕುಗಳು (IPR) ಮತ್ತು ಅದರ ವಾಣಿಜ್ಯೀಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಬುಂಟು ಸಂಸ್ಥಾಪಕರು-ಅಧ್ಯಕ್ಷರು ಮತ್ತು ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿಗಳಾದ ಕೆ. ರತ್ನಪ್ರಭಾ, ಉಬುಂಟು ಒಕ್ಕೂಟದ ಸಹಸಂಸ್ಥಾಪಕರು ಹಾಗೂ ಗೌರವಾನ್ವಿತ ಕಾರ್ಯದರ್ಶಿಗಳಾದ ಜ್ಯೋತಿ ಬಾಲಕೃಷ್ಣ, ಲತಾ ಗಿರೀಶ್ ಮತ್ತು ರಾಜಲಕ್ಷ್ಮಿ ಅವರು ಉಪಸ್ಥಿತರಿದ್ದರು. ಈ ವಿಚಾರ ಸಂಕಿರಣದಲ್ಲಿ 400ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಪಾಲ್ಗೊಂಡಿದ್ದರು.
