Site icon BosstvKannada

ಇಂಗಳೇಶ್ವರ ಗ್ರಾಮದ ವಿರಕ್ತಮಠದ ಶ್ರೀ ಲಿಂಗೈಕ್ಯ; ಸಿಎಂ ಸೇರಿದಂತೆ ಗಣ್ಯರ ಸಂತಾಪ

ವಿಜಯಪುರ: ಇಲ್ಲಿನ ಬಸವನಬಾಗೇವಾಡಿ (Basavana Bagewadi) ತಾಲೂಕಿನ ಇಂಗಳೇಶ್ವರ (Ingaleshwar) ಗ್ರಾಮದ ವಿರಕ್ತಮಠದ ಚನ್ನಬಸವ ಶ್ರೀ ಇಂದು ಲಿಂಗೈಕ್ಯರಾಗಿದ್ದಾರೆ.

ಚನ್ನಬಸವ ಶ್ರೀಗಳು ತಮ್ಮ 97ನೇ ವಯಸ್ಸಿನಲ್ಲಿ ಭಕ್ತರನ್ನು ಅಗಲಿದ್ದಾರೆ. ಅವರು ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶ್ರೀಗಳು ಬಸವಾದಿ ಶರಣರ ವಚನಗಳ ತತ್ವದಂತೆ ಬದುಕು ಸಾಗಿಸಿ, ಭಕ್ತರನ್ನು ಅದೇ ದಾರಿಗೆ ತರುವ ಕಾಯಕ ಮಾಡಿದ್ದರು. ಇಂಗಳೇಶ್ವರದಿಂದ ಶ್ರೀಕ್ಷೇತ್ರ ಉಳವಿಯವರೆಗೆ ಪಾದಯಾತ್ರೆ ನಡೆಸಿ, ವಚನಗಳ ತತ್ವಗಳನ್ನು ಜನರಿಗೆ ಊಣಬಡಿಸಲು ಯತ್ನಿಸಿದ್ದರು.

ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ದುಃಖವಾಯಿತು.
ಇಂಗಳೇಶ್ವರದ ವಚನ ಶಿಲಾಶಾಸನ ಮಂಟಪದಲ್ಲಿ ಕಲ್ಲುಗಳ ಮೇಲೆ ವಚನಗಳನ್ನು ಕೆತ್ತಿಸಿ, ಶರಣರ ಪರಂಪರೆ ಹಾಗೂ ವಿಚಾರಧಾರೆಯನ್ನು ಸಮಾಜಕ್ಕೆ ಸಾರುವ ಕಾರ್ಯವನ್ನು ನಿಸ್ವಾರ್ಥದಿಂದ ಮಾಡುತ್ತಾ ಬಂದವರು. ಧರ್ಮಕಾರ್ಯದ ಜೊತೆ ಸಾಮಾಜಿಕ ಸೇವೆಯನ್ನೂ ಸಲ್ಲಿಸುತ್ತಿದ್ದ ಶ್ರೀಗಳ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ. ಶ್ರೀಗಳ ಆತ್ಮಕ್ಕೆ ಚಿರಶಾಂತಿ ದೊರಕಲಿ, ಮಠದ ಭಕ್ತಾದಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಬಸವಾದಿ ಶರಣರ ವಚನಗಳು, ಮಾನವೀಯತೆ, ಸಮಾನತೆ ಸಂದೇಶಗಳನ್ನ ಶಿಲೆಯಲ್ಲಿ ಕೆತ್ತಿಸಿದ್ದರು. ಅಲ್ಲದೇ ಅವುಗಳನ್ನ ಶಿಲಾಮಂಟಪದಲ್ಲಿ ಪ್ರತಿಷ್ಠಾಪಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶ್ರೀಗಳ ಅಗಲಿಕೆಗೆ ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ನಾಳೆ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ.

Exit mobile version