Site icon BosstvKannada

ಕೆಲ ಶಾಸಕರಿಗೆ ಸಮಸ್ಯೆ ಇರಬಹುದು.. ಆ ಬಗ್ಗೆ ಲಿಖಿತ ರೂಪದಲ್ಲಿ ಕೊಡುವಂತೆ ಸೂಚನೆ : ಸುರ್ಜೇವಾಲಾ

ರಾಜ್ಯ ಕಾಂಗ್ರೆಸ್​ನಲ್ಲಿ ಕೆಲ ಶಾಸಕರಿಗೆ ಸಮಸ್ಯೆ ಇರಬಹುದು. ಆ ಬಗ್ಗೆ ಲಿಖಿತ ರೂಪದಲ್ಲಿ ಕೊಡುವಂತೆ ತಿಳಿಸಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರಾದ ರಾಜು ಕಾಗೆ ಮತ್ತು ಬಿ.ಆರ್. ಪಾಟೀಲ್ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ಮಧ್ಯೆ ಸಿಎಂ ದೆಹಲಿಗೆ ತೆರಳಿರುವ ಕುರಿತು ಪ್ರತಿಕ್ರಿಯೆ ನೀಡುತ್ತಾ, ಸಿಎಂ ಹಾಗೂ ಡಿಸಿಎಂ ದೆಹಲಿಗೆ ಹೋಗಲು ಯಾವುದೇ ನಿರ್ಬಂಧ ಇಲ್ಲ. ರಾಜ್ಯದ ಪರವಾಗಿ ಮಾತನಾಡಲು ದೆಹಲಿಗೆ ಹೋಗುತ್ತಿದ್ದಾರೆ. ರಾಜ್ಯದ ಜನರ ವಿರುದ್ಧ ತಾರತಮ್ಯ ಮಾಡಬೇಡಿ ಎಂದು ಹೇಳಲು ಹೋಗಿದ್ದಾರೆ. ಅದು ಅವರ ಕರ್ತವ್ಯವಾಗಿದೆ. ಇನ್ನು ಕೆಲ ಶಾಸಕರಿಗೆ ಸಮಸ್ಯೆ ಇರಬಹುದು. ಅದನ್ನು ಅವರು ಲಿಖಿತ ರೂಪದಲ್ಲಿ ಕೊಡಲು ಹೇಳಿದ್ದೇವೆ ಎಂದರು.

ತೊಗರಿ ಬೇಳೆಗೆ ಎಂಎಸ್ ಪಿ ಕೊಡಲು ಒತ್ತಾಯ

ರಾಜ್ಯದ ರೈತರು 10 ಲಕ್ಷ ಕ್ವಿಂಟಾಲ್ ತೊಗರಿ ಬೇಳೆ ಬೆಳೆಯುತ್ತಿದ್ದಾರೆ. ಬೆಲೆ ಕುಸಿತ ಹಾಗೂ ಈ ಬೆಂಬಲ ಬೆಲೆ ಕೊಡದೇ ಇರುವ ಕಾರಣ ರಾಜ್ಯದ ರೈತರಿಗೆ 1,550 ಕೋಟಿ ರೂ‌. ನಷ್ಟವಾಗುತ್ತಿದೆ. ಮೋದಿ ಸರ್ಕಾರ ತಾರತಮ್ಯ ಮಾಡುತ್ತಿದೆ. ರಾಜ್ಯದ ರೈತರಿಗೆ ತಾರತಮ್ಯ ಮಾಡುತ್ತಿದೆ. ಮೋದಿ ಸರ್ಕಾರ ಮೊಸಾಂಬಿಕ್, ಮ್ಯಾನ್ಮಾರ್, ಆಸ್ಟ್ರೇಲಿಯಾದ ರೈತರನ್ನು ಬೆಂಬಲಿಸುತ್ತಿದೆ ಎಂದು ಅವರು ಆರೋಪಿಸಿದರು. ಅಲ್ಲದೆ ಕೇಂದ್ರ ಸರ್ಕಾರ ತೊಗರಿ ಬೇಳೆ ಆಮದನ್ನು ತೆರಿಗೆ ಮುಕ್ತ ಮಾಡಿದೆ. ಮಾರ್ಚ್ 2026ರ ವರೆಗೆ ಆಮದು ತೆರಿಗೆ ಮುಕ್ತ ಮಾಡಿದೆ. ನಿಮಗೆ ದೇಶದ ರೈತರ ಅಗತ್ಯ ಇಲ್ಲ. ವಿದೇಶಿ ರೈತರ ಅಗತ್ಯ ಇದೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ಸರ್ಕಾರ ಮೊಸಾಂಬಿಕ್ ದೇಶದ ಜೊತೆ ಎಂಒಯು ಮಾಡಿಕೊಂಡಿದೆ. ಇದೊಂದು ಆರ್ಥಿಕ ದಮನ ನೀತಿಯಾಗಿದೆ. ಎಂಎಸ್ ಪಿ ಕೊಡದ ಕಾರಣ ರಾಜ್ಯದ ರೈತರಿಗೆ ಸುಮಾರು 1,500 ಕೋಟಿ ರೂ. ನಷ್ಟ ಆಗುತ್ತಿದೆ. ಕೇಂದ್ರದ ಸಚಿವರಾದ ವಿ. ಸೋಮಣ್ಣ, ಪ್ರಲ್ಹಾದ್ ಜೋಶಿ, ಹೆಚ್ ಡಿ ಕುಮಾರಸ್ವಾಮಿ ಏನು ಮಾಡುತ್ತಿದ್ದೀರಿ. ರೈತರಿಗೆ ತಾರತಮ್ಯ ಆಗುತ್ತಿರುವಾಗ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಅವರ ಜೆಡಿಎಸ್​ ಪಕ್ಷ ಹೇಗೆ ಕೇಂದ್ರ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಕೇಂದ್ರ ಸಚಿವರು ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಸುರ್ಜೇವಾಲಾ ಕಿಡಿಕಾರಿದರು.

Exit mobile version