ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿ ರೈತರು ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಿದ್ದರು. ನಂತರ ಸರ್ಕಾರವು ಕಬ್ಬಿಗೆ ದರ ನಿಗದಿ ಮಾಡಿತ್ತು. ಇದನ್ನು ಪ್ರಶ್ನಿಸಿ ಸಕ್ಕರೆ ಕಾರ್ಖಾನೆಗಳು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ಸರ್ಕಾರಕ್ಕೆ ನೋಟಿಸ್ ನೀಡಿದೆ.
ರಿಟ್ ಅರ್ಜಿಯ ಹಿನ್ನೆಲೆಯಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಮುಂದಿನ ವಿಚಾರಣೆಯನ್ನು ಡಿ. 17ಕ್ಕೆ ನಿಗದಿ ಪಡಿಸಿದೆ.
ರೈತರ ಹೋರಾಟದ ನಂತರ ರಾಜ್ಯ ಸರ್ಕಾರವು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,250 ರೂ. ದರ ನಿಗದಿ ಮಾಡಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕಟಾವು, ಸಾಗಾಣಿಕೆ ಸೇರಿದರೆ ಕಾರ್ಖಾನೆಗಳಿಗೆ 4,150 ರೂ. ವೆಚ್ಚವಾಗಲಿದೆ. ಇದು ಸಕ್ಕರೆ ಕಾರ್ಖಾನೆಗಳ ನಷ್ಟಕ್ಕೆ ಕಾರಣವಾಗಲಿದೆ ಎಂದು ಮಾಲೀಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೇಣುಕಾ ಶುಗರ್ಸ್, ನಿರಾಣಿ ಶುಗರ್ಸ್, ಜೆಮ್ ಶುಗರ್ಸ್, ಕೆಪಿಆರ್ ಶುಗರ್ಸ್, ಗೋದಾವರಿ ಬಯೋ ರಿಪೈನರೀಸ್ ಈ ಬಗ್ಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.
ಸದ್ಯ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಈ ಸಂದರ್ಭದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೇ, ಸರ್ಕಾರಕ್ಕೆ ನೋಟಿಸ್ ನೀಡಿದೆ. ಸೌತ್ ಇಂಡಿಯಾ ಶುಗರ್ ಮಿಲ್ಸ್ ಅಸೋಸಿಯೇಷನ್ ಪರ ಹಿರಿಯ ವಕೀಲ ಹೆಚ್.ಎನ್. ಶಶಿಧರ್ ವಾದ ಮಂಡಿಸಿದ್ದರು. ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಕೂಡ, ರೈತರು ಇಲ್ಲದೆ ನೀವು ಇಲ್ಲ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ಎಥೆನಾಲ್ ಸೇರಿದಂತೆ ಎಲ್ಲದರಲ್ಲೂ ಸಂಪಾದನೆ ಮಾಡಿದರೂ ರೈತರಿಗೆ ಕೊಡಲು ಮನಸಿಲ್ಲ ಎಂದು ಅಭಿಪ್ರಾಯಪಟ್ಟರು.
