Site icon BosstvKannada

ಮದ್ಯ ಕುಡಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಬೆಂಗಳೂರು: ನಗರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿರುವ ಘಟನೆಯೊಂದು ವರದಿಯಾಗಿದೆ.

ಕೇರಳ ಮೂಲದ ಪಿಯುಸಿ ವಿದ್ಯಾರ್ಥಿನಿಯನ್ನು ಲಾಡ್ಜ್‌ಗೆ ಕರೆದೊಯ್ದು ಮದ್ಯ ಕುಡಿಸಿ ಅಪ್ರಾಪ್ತನೊಬ್ಬ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಸಂತ್ರಸ್ತೆ ದೂರು ನೀಡಿದ್ದು, ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇರಳ ಮೂಲದ 16ರ ಬಾಲಕಿ, ನಗರದಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದ ಇಲ್ಲಿನ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದಾಳೆ.

ಈ ವಿದ್ಯಾರ್ಥಿನಿಗೆ ಇತ್ತೀಚೆಗೆ ಹದಿನೇಳೂವರೆ ವರ್ಷದ ವಿದ್ಯಾರ್ಥಿಯೋರ್ವ ಪರಿಚಯವಾಗಿದ್ದಾನೆ. ಆತ ಗುರುವಾರ ರಾತ್ರಿ ಯಲಹಂಕ ಹತ್ತಿರದ ದೇವನಹಳ್ಳಿ ಸಮೀಪದ ಲಾಡ್ಜ್‌ಗೆ ಕರೆದೊಯ್ದು ಮದ್ಯ ಕುಡಿಸಿ ಅತ್ಯಾಚಾರ ಮಾಡಿದ್ದಾನೆಂದು ಸಂತ್ರಸ್ತ ಬಾಲಕಿ ದೂರು ನೀಡಿದ್ದಾರೆ.. ಅಪ್ರಾಪ್ತ ಗೆಳೆಯನ ಇಬ್ಬರು ಸ್ನೇಹಿತರು ಕೂಡ ಸ್ಥಳದಲ್ಲಿ ಇದ್ದರು ಎಂದು ಕೂಡ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಆಪ್ತ ಸಮಾಲೋಚನೆ ನಡೆಯುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version