Site icon BosstvKannada

ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಬಿರುಗಾಳಿ : ಬಿವೈವಿ, ಆರ್‌. ಅಶೋಕ ಹೈಕಮಾಂಡ್‌ ಭೇಟಿ

ರಾಜ್ಯ ಬಿಜೆಪಿಯಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತಿವೆ. ಪಕ್ಷದಲ್ಲಿ ಮೇಜರ್‌ ಸರ್ಜರಿ ಮಾಡಲಾಗುತ್ತದೆ ಎಂದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಬಿ.ವೈ.ವಿಜಯೇಂದ್ರ ಹಾಗೂ ಆರ್‌. ಅಶೋಕ್‌ ಅವರು ದಿಢೀರನೆ ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಎಡೆ
ಮಾಡಿಕೊಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಯುವ ಸಾಧ್ಯತೆಗಳಿದ್ದು, ಸ್ಥಾನಕ್ಕೆ ಹಲವರ ಹೆಸರುಗಳು ಕೇಳಿ ಬರುತ್ತಿವೆ. ಮುಂದಿನ ರಾಜ್ಯಾಧ್ಯಕ್ಷರು ಯಾರಾಗುತ್ತಾರೆಂಬ ಕುರಿತಂತೆಯೂ ಊಹಾಪೋಹಗಳು ಏಳುವಂತೆ ಮಾಡಿದೆ.

ನನ್ನ ದೆಹಲಿ ಭೇಟಿ ವೈಯಕ್ತಿಕ. ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಪಕ್ಷದ ಅಧ್ಯಕ್ಷರ ಹೆಸರು ಘೋಷಣೆ ಅತಿ ಶೀಘ್ರದಲ್ಲೆ ಆಗಲಿದೆ ವಿಜಯೇಂದ್ರ ಹೇಳಿದ್ದರು. ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಬಂದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ 18 ಸ್ಥಾನ ಗಳಿಸುವಂತೆ ಮಾಡಿದ್ದ ವಿಜಯೇಂದ್ರ ಪರ ಹಲವು ನಾಯಕರಿದ್ದು, ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್‌ ಚಿಂತನೆ ನಡೆಸುತ್ತಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿದ್ದೇ ಆದರೆ ಸ್ಥಾನಕ್ಕೆ ಬಿ.ವೈ.ರಾಘವೇಂದ್ರ ಅವರನ್ನು ನೇಮಿಸಿ, ಅಸಮಾಧಾನವನ್ನು ಶಮನಗೊಳಿಸಲು ಬಿಜೆಪಿ ಯತ್ನಿಸಬಹುದು ಎನ್ನಲಾಗುತ್ತಿದೆ.

ಈ ಮೂಲಕ ಅಸಮಾಧಾನಕ್ಕೂ ಮದ್ದು ನೀಡಿ, ಯಡಿಯೂರಪ್ಪ ಕುಟುಂಬಕ್ಕೂ ಗೌರವ ನೀಡಲು, ಯಡಿಯೂರಪ್ಪ ಅವರನ್ನು ದ್ವೇಷಿಸದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಹೈಕಮಾಂಡ್‌ ಮುಂದಾಗಿದೆ.ಏತನಧ್ಯೆ ರಾಜ್ಯಾಧ್ಯಕ್ಷ ಹುದ್ದೆಗೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲವು ಸಾಧಿಸಿದ್ದ ಕೇಂದ್ರ ಸಚಿವ ವಿ. ಸೋಮಣ್ಣ ಮತ್ತು ಹಾವೇರಿ ಸಂಸದ ಬಸವರಾಜ ಬೊಮಾಯಿ ಅವರ ಹೆಸರೂ ಕೂಡ ಕೇಳಿ ಬರುತ್ತಿದೆ. ಇಬ್ಬರೂ ಅನುಭವಿ ನಾಯಕರಾಗಿದ್ದಾರೆ. ಪಕ್ಷವು ಉತ್ತರ ಕರ್ನಾಟಕದ ನಾಯಕ ಮತ್ತು ಅನುಭವ ಹೊಂದಿರುವ ಲಿಂಗಾಯತ ವ್ಯಕ್ತಿಯನ್ನು ಬಯಸಿದರೆ ಬೊಮಾಯಿ ಅವರನ್ನು ನೇಮಿಸಬಹುದು ಎನ್ನಲಾಗಿದೆ.

ಇದಲ್ಲದೆ ಅರವಿಂದ್‌ ಬೆಲ್ಲದ್‌, ಜಗದೀಶ್‌ ಶೆಟ್ಟರ್‌ ಮತ್ತು ಮುರುಗೇಶ್‌ ನಿರಾಣಿ ಹೆಸರೂ ಕೇಳಿ ಬರುತ್ತಿದೆ. ಆದರೆ ಅವರನ್ನು ಸದ್ಯಕ್ಕೆ ಪರಿಗಣಿಸಲಾಗುವುದಿಲ್ಲ. ರಾಜ್ಯದಲ್ಲಿ ಸಮುದಾಯದ ಚುನಾವಣಾ ಮಹತ್ವ ಮತ್ತು ಜಾತಿ ಪ್ರಾತಿನಿಧ್ಯದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ರಾಜ್ಯಾಧ್ಯಕ್ಷರು ಲಿಂಗಾಯತ ನಾಯಕರಾಗಿರಬೇಕು ಎಂಬ ಬಲವಾದ ಮಾತುಗಳು ಪಕ್ಷದೊಳಗೆ ಕೇಳಿಬರುತ್ತಿದೆ.

ಆದಾಗ್ಯೂ ಬಿಲ್ಲವ ಸಮುದಾಯದ ನಾಯಕ ಸುನಿಲ್‌ ಕುಮಾರ್‌ ಮತ್ತು ಒಕ್ಕಲಿಗ ಮಹಿಳೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರರ ಹೆಸರುಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಈ ನಡುವೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನೂ ಬದಲಾವಣೆ ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿದೆ.ದೆಹಲಿಗೆ ಭೇಟಿ ನೀಡಿದ್ದ ವಿಜಯೇಂದ್ರ ಅವರು, ಈಗಾಗಲೇ ರಾಜ್ಯಕ್ಕೆ ವಾಪಸ್ಸಾಗಿದ್ದು, ಅಶೋಕ್‌ ಅವರು ಇನ್ನೂ ದೆಹಲಿಯಲ್ಲಿಯೇ ಇರುವುದು ಈ ಚರ್ಚೆಗಳಿಗೆ ಮತ್ತಷ್ಟು ಇಂಬು ನೀಡಿದೆ.

Exit mobile version