ಮಹೇಶ್‌ಶೆಟ್ಟಿ ತಿಮರೋಡಿ ಅವರ ನಿವಾಸದ ಮೇಲೆ ಇಂದು ಬೆಳಿಗ್ಗೆ ಎಸ್‌ಐಟಿ ದಾಳಿ ನಡೆಸಿದೆ. ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂಳಿರುವುದಾಗಿ ಹೇಳಿದ್ದ ಬುರುಡೆ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಹಿನ್ನಲೆ ಉಜಿರೆಯಲ್ಲಿರುವ ಮಹೇಶ್ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ.
ಬೆಳ್ತಂಗಡಿ ನ್ಯಾಯಾಧೀಶರಿಂದ ಸರ್ಚ್‌ವಾರೆಂಟ್ ಪಡೆದುಕೊಂಡು ಆರೋಪಿ ಬುರುಡೆ ಚಿನ್ನಯ್ಯನನ್ನು ಕರೆದುಕೊಂಡು ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ಮಾಡುತ್ತಿದ್ದಾರೆ. ಮಹೇಶ್‌ಶೆಟ್ಟಿ ಮನೆ ಹಾಗೂ ಪಕ್ಕದಲ್ಲೇ ಇರುವ ಸಹೋದರ ಮೋಹನ್ ಕುಮಾರ್ ಅವರ ಮನೆಯನ್ನೂ ಸಹ ಶೋಧ ನಡೆಸಿದೆ. ಮಹೇಶ್ ತಿಮರೋಡಿ ಮನೆಯಲ್ಲಿ ಶೋಧಕಾರ್ಯ ಮುಂದುವರೆದಿದ್ದು, ಆರೋಪಿ ಚಿನ್ನಯ್ಯ ಇರುತ್ತಿದ್ದ ಕೊಠಡಿಯಲ್ಲಿ ಎಸ್‌ಐಟಿ ಶೋಧ ಕಾರ್ಯ ನಡೆಸಿದ್ದು ಚಿನ್ನಯ್ಯ ಬಳಸುತ್ತಿದ್ದ ವಸ್ತುಗಳನ್ನ ಹಾಗೂ ಕೆಲ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಚಿನ್ನಯ್ಯ ಬಳಸುತ್ತಿದ್ದ ಫೋನನ್ನು ವಶಕ್ಕೆ ಪಡೆದಿದ್ದು, ತಿಮರೋಡಿ ಮನೆಯ ಕೊಠಡಿಯಲ್ಲಿ ಚಿನ್ನಯ್ಯ ಕೆಲ ರಾಷ್ಟ್ರೀಯ ಮಾಧ್ಯಮ ಮತ್ತು ಯೂಟ್ಯೂಬ್ ವಾಹಿನಿಗಳಿಗೆ ಸಂದರ್ಶನ ನೀಡಿದ್ದ. ಈ ಸಂದರ್ಶನದ ವಿಡಿಯೋಗಳು ಕೆಲ ದಿನಗಳಿಂದ ಪ್ರಸಾರವಾಗುತ್ತಿದೆ. ಹೀಗಾಗಿ ಸಂದರ್ಶನ ನೀಡಿದ ಜಾಗಗಳ ಮಹಜರು ಪ್ರಕ್ರಿಯೆಯನ್ನು ಎಸ್‌ಐಟಿ ಪೊಲೀಸರು ನಡೆಸಿದ್ದಾರೆ.
ಅಲ್ಲದೆ ಮಹೇಶ್ ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಶೋಧ ಕಾರ್ಯಮುಂದುವರೆಸಿದ್ದಾರೆ.
Read Also : ಧರ್ಮಸ್ಥಳ ಪ್ರಕರಣಕ್ಕೆ NIA ತನಿಖೆ ಅವಶ್ಯಕತೆ ಇಲ್ಲ – ಪರಮೇಶ್ವರ್

