ಕಲ್ಲು ಬಂಡೆಯ ಹಾಗೆ ನಾವು ಅಧಿಕಾರದಲ್ಲಿದ್ದು ಮುಂದಿನ 5 ವರ್ಷ ಸರಕಾರ ನಡೆಸುತ್ತೇವೆ, ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಾವು ಬೆಂಗಳೂರು ಕಂದಾಯ ವಲಯ ವ್ಯಾಪ್ತಿಗೆ ಸಂಬಂಧಿಸಿ ಸಚಿವ ಸಂಪುಟ ಸಭೆ ನಡೆಸಿದ್ದೇವೆ. ಈ ಭಾಗದಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಕಲಬುರಗಿ, ಬೆಳಗಾವಿ ವ್ಯಾಪ್ತಿಯ ಸಂಪುಟ ಸಭೆ ನಡೆಸುತ್ತವೆ. ವಿಜಯಪುರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸಿಮರು
ಬಿಜೆಪಿಯವರಿಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸಿಮರು. ಬಿಜೆಪಿಯವರು ನಂಬುತ್ತಾರೋ ಬಿಡುತ್ತಾರೋ ಗೊತ್ತಿಲ್ಲ, ಸರಕಾರದಲ್ಲಿ ನಾವೆಲ್ಲಾ ಒಟ್ಟಾಗಿದ್ದೇವೆ. ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಸಿಎಂ ಹೇಳಿದರು.
ನಾನೇ 5 ವರ್ಷ ಸಿಎಂ
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ. ಏನಾದರೂ ಮಾಡಿದ್ದರೆ ಸಾಕ್ಷಿ ಗುಡ್ಡೆ ಕೊಡಲಿ. ನಾಲ್ಕು ವರ್ಷ ಅಧಿಕಾರದಲ್ಲಿದ್ದರು, ಕುಮಾರಸ್ವಾಮಿ ಅವರೊಂದಿಗೆ ಸಮ್ಮಿಶ್ರ ಸರಕಾರ ನಡೆಸಿದ್ದರೂ, ಯಾವುದೇ ಕ್ಷೇತ್ರದಲ್ಲೂ ಏನೂ ಕೆಲಸ ಮಾಡಿಲ್ಲ. ಸುಮ್ಮನೆ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ. ಮುಂದಿನ ಐದು ವರ್ಷ ನಾನೆ ಸಿಎಂ ಆಗಿ ಮುಂದುವರಿಯುತ್ತೇನೆ. ಆರ್. ಅಶೋಕ್, ವಿಜಯೇಂದ್ರ, ಛಲವಾದಿ ನಾರಾಯಣ ಸ್ವಾಮಿ ಏನು ನಮ್ಮ ಹೈಕಮಾಂಡಾ? ಅವರೆಲ್ಲ ಬಿಜೆಪಿಯವರು ಎಂದರು.
ಜಾತಿ ಸಮೀಕ್ಷೆ ಕುರಿತ ಗೊಂದಲಗಳಿಗೆ ಸಿಎಂ ಸ್ಪಷ್ಟನೆ
ಜಾತಿ ಸಮೀಕ್ಷೆ ಕುರಿತ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸಮೀಕ್ಷೆ ಯನ್ನು ಆನ್ ಲೈನ್ ಮಾಡಬಹುದಲ್ಲ. ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಪರಿಶಿಷ್ಟ ಜಾತಿಗಳ ಸಮೀಕ್ಷೆ ಮಾಡುತ್ತಿದ್ದೇವೆ. 101 ಜಾತಿಗಳಿವೆ, ಮನೆ ಮನೆಗೂ ತೆರಳಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

