BosstvKannada

ಬೆಂಚ್‌ ಕಾದವನು ಚಾಂಪಿಯನ್‌ ಆದ ರೋಚಕ ಕಥೆ!

ಬೆಂಗಳೂರು, ಮಾ.09: ನ್ಯೂಜಿಲೆಂಡ್ ‌ತಂಡವನ್ನು ಭಾರತ 96 ರನ್‌ಗಳಿಂದ ಸೋಲಿಸಿ ತನ್ನ ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತು. ಇದರೊಂದಿಗೆ, ಭಾರತ ತಂಡವು ಅತಿ ಹೆಚ್ಚು ಟಿ20 ವಿಶ್ವಕಪ್ ಟ್ರೋಫಿಗಳನ್ನು ಗೆದ್ದ ದಾಖಲೆ ಸೃಷ್ಟಿಸಿತು.

ಈ ಪಂದ್ಯದಲ್ಲಿ, ನ್ಯೂಜಿಲೆಂಡ್ ವಿರುದ್ಧ ಭಾರತ ಆರಂಭದಿಂದ ಕೊನೆಯ ಓವರ್‌ವರೆಗೆ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿತು. ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದ ಟೀಮ್ ಇಂಡಿಯಾ ಸೂಪರ್- 8 ಹಂತಕ್ಕೆ ಅರ್ಹತೆ ಪಡೆದಿತ್ತು. ಆದರೆ, ಸೂಪರ್-8ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋಲನ್ನು ಅನುಭವಿಸಿತ್ತು. ಈ ಸೋಲು ಟೀಮ್ ಇಂಡಿಯಾಕ್ಕೆ ತವರಿನಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಹಾದಿಯನ್ನು ಕಠಿಣಗೊಳಿಸಿತ್ತು.

ಸೂಪರ್ 8 ರಲ್ಲಿ ಎರಡು ಪಂದ್ಯಗಳನ್ನು ಭಾರಿ ರನ್ ರೇಟ್ ಅಂತರದಿಂದ ಗೆಲ್ಲಬೇಕಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಇತ್ತು. ಇಲ್ಲಿಂದ ಈ ಒಬ್ಬ ಆಟಗಾರ ಟೀಮ್ ಇಂಡಿಯಾದಲ್ಲಿ ಗೆಲುವಿನ ಭರವಸೆಯನ್ನು ಹೆಚ್ಚಿಸಿದರು. ಅಂದು ಈ ಆಟಗಾರನನ್ನು ವೇಸ್ಟ್ ಎಂದು ಬೆಂಚ್​ ಕಾಯುವಂತೆ ಮಾಡಲಾಯಿತು. ನಂತರ, ಈ ಆಟಗಾರ ಅವಕಾಶವನ್ನು ಬಳಸಿಕೊಂಡರು ಮತ್ತು ಟೀಮ್ ಇಂಡಿಯಾವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೌದು, ಈ ಆಟಗಾರ ಬೇರೆ ಯಾರು ಅಲ್ಲ, ಅನುಭವಿ ವಿಕೆಟ್​​ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್. ಲೀಗ್ ಹಂತದಲ್ಲಿ ಕೇವಲ ಒಂದು ಪಂದ್ಯ ಆಡಿದ್ದ ಸಂಜು ಸ್ಯಾಮ್ಸನ್ ಅವರಿಗೆ ಬೆಂಚ್ ಕಾಯುವ ಪರಿಸ್ಥಿತಿ ಎದುರಾಗಿತ್ತು. ಬಳಿಕ ಸೂಪರ್- 8 ರಲ್ಲಿ ಸಂಜು ಸ್ಯಾಮ್ಸನ್ ಅದೃಷ್ಟ ಬದಲಾಯಿತು. ಜೊತೆಗೆ ಟೀಮ್ ಇಂಡಿಯಾ ಫೈನಲ್ ತಲುಪಲು ಸ್ಯಾಮ್ಸನ್ ಅವರ ಈ ಮೂರು ಇನ್ನಿಂಗ್ಸ್ ನೆರವಾಯಿತು.

ಜಿಂಬಾಬ್ವೆ ವಿರುದ್ಧದ ಸೂಪರ್ 8ರಲ್ಲಿ ಮತ್ತೆ ಆಟಕ್ಕೆ ಇಳಿದ ನಂತರ, ಸಂಜು ಸ್ಯಾಮ್ಸನ್ ಹಿಂತಿರುಗಿ ನೋಡಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ 97 ರನ್ ಗಳಿಸಿದ ನಂತರ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 89 ರನ್ ಗಳಿಸಿ ಪಂದ್ಯ ಗೆಲ್ಲಲು ಸಹಾಯ ಮಾಡಿದರು. ಇದಲ್ಲದೆ, ಫೈನಲ್‌ನಲ್ಲಿಯೂ ಅವರು ಅದ್ಭುತ ಪ್ರದರ್ಶನ ನೀಡಿದರು. ಸ್ಯಾಮ್ಸನ್ ಆಡಿದ ಕೊನೆಯ ಮೂರು ಪಂದ್ಯಗಳಲ್ಲಿ ಅರ್ಧಶತಕಗನ್ನು ಬಾರಿಸಿದರು.

ನ್ಯೂಜಿಲೆಂಡ್ ವಿರುದ್ಧ ಸಂಜು ಸ್ಯಾಮ್ಸನ್ ಅವರು ಕೇವಲ 46 ಎಸೆತಗಳಲ್ಲಿ 89 ರನ್ ಗಳಿಸುವ ಮೂಲಕ ಕಿವೀಸ್ ಬೌಲರ್‌ಗಳನ್ನು ಸೋಲಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 5 ಬೌಂಡರಿಗಳು ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು. ಸ್ಯಾಮ್ಸನ್ ಭಾರತವನ್ನು ಬೃಹತ್ ಸ್ಕೋರ್‌ಗೆ ಮುನ್ನಡೆಸಿದರು. ಇದು ನ್ಯೂಜಿಲೆಂಡ್‌ಗೆ ಚೇತರಿಸಿಕೊಳ್ಳಲು ಅಸಾಧ್ಯವಾಯಿತು. ಸಂಜು ಸ್ಯಾಮ್ಸನ್ ಆಡಿದ 5 ಪಂದ್ಯಗಳಲ್ಲಿ 321 ರನ್ ಗಳಿಸಿದರು. ಈ ಮೂಲಕ ಸಂಜು ಸ್ಯಾಮ್ಸನ್ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

Exit mobile version