ಬೆಂಗಳೂರು, ಮಾ.09: 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ದಾಖಲೆಗಳ ಮಳೆಯನ್ನೇ ಸುರಿಸುತ್ತಿದೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ವಿಶ್ವ ದಾಖಲೆಯ ಬೆನ್ನಲ್ಲೇ, ಸ್ಟಾರ್ ಬ್ಯಾಟರ್ ಸಂಜು ಸ್ಯಾಮ್ಸನ್ ಕೂಡ ಕ್ರಿಕೆಟ್ ಲೋಕದ ಅಪರೂಪದ ಸಾಧನೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಸಂಜು ಸ್ಯಾಮ್ಸನ್, ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ವಿಶ್ವದ ಏಳನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಪಂದ್ಯಗಳಲ್ಲಿ 50+ ಸ್ಕೋರ್ ಮಾಡಿದ ಭಾರತದ ಕೇವಲ ಮೂರನೇ ಆಟಗಾರ ಎಂಬ ಕೀರ್ತಿ ಸಂಜು ಪಾಲಾಗಿದೆ. ಇದಕ್ಕೂ ಮೊದಲು ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಮಾತ್ರ ಈ ಸಾಧನೆ ಮಾಡಿದ್ದರು. ಈಗ ಸಂಜು ಸ್ಯಾಮ್ಸನ್ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ವಿರಾಟ್ ಕೊಹ್ಲಿ ಅವರು 2016 ಮತ್ತು 2021ರ ಟಿ20 ವಿಶ್ವಕಪ್ ಆವೃತ್ತಿಗಳನ್ನು ಸೇರಿಸಿ ಈ ಸಾಧನೆ ಮಾಡಿದ್ದರು. 2016ರ ವಿಶ್ವಕಪ್‌ನ ಕೊನೆಯ ಎರಡು ಪಂದ್ಯಗಳಲ್ಲಿ ಅಜೇಯ 82 ಮತ್ತು ಅಜೇಯ 89 ರನ್ ಗಳಿಸಿದ್ದ ಕೊಹ್ಲಿ, ನಂತರ 2021ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ 57 ರನ್ ಗಳಿಸುವ ಮೂಲಕ ಸತತ ಮೂರು ಅರ್ಧಶತಕಗಳ ಮೈಲಿಗಲ್ಲು ತಲುಪಿದ್ದರು.
ಆದರೆ ಸಂಜು ಸ್ಯಾಮ್ಸನ್ ಒಂದೇ ಆವೃತ್ತಿಯ ಅತ್ಯಂತ ನಿರ್ಣಾಯಕ ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ. ಈ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸಂಜು ಸ್ಯಾಮ್ಸನ್ ಭಾರತ ತಂಡವು ಬೃಹತ್ ಮೊತ್ತ ಪೇರಿಸಲು ಪ್ರಮುಖ ಕಾರಣರಾದರು.

